Thursday, December 06, 2007

ಕಾಳಿದಾಸ - ೨

ಹಿಂದಿನ ಕಂತಿನಲ್ಲಿ ಹೇಳಿದಂತೆ ಕಾಳಿದಾಸ ಧರ್ಮದ ಸ್ವರೂಪವನ್ನು, ಅದರ ವಿವಿಧ ಆಯಾಮಗಳನ್ನು ತನ್ನ ಕಾವ್ಯಗಳಲ್ಲಿ ಕೆಲವೆಡೆ ಪ್ರಕಟವಾಗಿ, ಕೆಲವೆಡೆ ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ. ಧರ್ಮವಿರುದ್ಧವಾಗಿ ನಡೆದುಕೊಳ್ಳುವ ಪಾತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಮೆ. ಇದು ಸ್ವಲ್ಪ ಅಸಹಜ ಎಂದೆನ್ನಿಸಿದರೂ ಮನಸ್ಸಿಗೆ ಬಹಳ ಹಿತವನ್ನು ಕೊಡುವಂತಹ ವಿಷಯ.

ಶಕುಂತಲೆಯನ್ನು ದುಷ್ಯಂತ ಮೊದಲ ಬಾರಿ ನೋಡಿದಾಗಲೇ ಅವಳ ಬಗ್ಗೆ ಮೋಹವುಂಟಾಗುತ್ತದೆ. ಆದರೆ ಅವಳು ಮುನಿಕನ್ಯೆ, ಪರಿಗ್ರಹಕ್ಕೆ ಯೋಗ್ಯಳೋ ಅಲ್ಲವೋ ಎಂದು ಅವನಿಗೆ ಸಂದೇಹವುಂಟಾದರೂ,
'ಅಸಂಶಯಂ ಕ್ಷತ್ರಪರಿಗ್ರಹಕ್ಷಮಾ ಯದಾರ್ಯಮಸ್ಯಾಮ್ ಅಭಿಲಾಷಿ ಮೇ ಮನಃ' (ಈಕೆ ನಿಸ್ಸಂಶಯವಾಗಿ ಕ್ಷತ್ರಿಯನನ್ನು ಮದುವೆ ಮಾಡಿಕೊಳ್ಳಲು ಯೋಗ್ಯಳು. ಏಕೆಂದರೆ ಧರ್ಮಪರವಾದ ನನ್ನ ಮನಸ್ಸು ಇವಳಲ್ಲಿ ಆಸಕ್ತವಾಗಿದೆ)
ಎಂದುಕೊಳ್ಳುತ್ತಾನೆ. ನಂತರ ಅನಸೂಯೆ-ಪ್ರಿಯಂವದೆಯರನ್ನು ಶಕುಂತಲೆಯ ವೃತ್ತಾಂತದ ಬಗ್ಗೆ ವಿಚಾರಿಸಿಯೇ ಮುಂದಿನ ಹೆಜ್ಜೆಯನ್ನಿಡುತ್ತಾನೆ (ಇದಕ್ಕೆ ಕಾರಣಗಳು ಎರಡು.
೧. ಹಿಂದಿನ ಕಾಲದಲ್ಲಿ ವಿರಕ್ತರಾದ, ಯೋಗ್ಯಕನ್ಯೆಯರು ಮದುವೆಯಾಗದೆ ಬ್ರಹ್ಮವಾದಿನಿಯರಾಗುವ ಸಂಪ್ರದಾಯವಿತ್ತು. ಶಕುಂತಲೆ ಬ್ರಹ್ಮವಾದಿನಿಯಲ್ಲವೆಂದು ತಿಳಿದುಕೊಳ್ಳುವುದು ಒಂದು ಅಂಶ.
೨. ಕ್ಷತ್ರಿಯರು ಬ್ರಾಹ್ಮಣಕನ್ಯೆಯರನ್ನು ಮದುವೆಯಾದರೆ ಅದು ಪ್ರತಿಲೋಮವಿವಾಹ. ಅವರ ಸಂತಾನ ಕ್ಷತ್ರಿಯರಾಗುವುದಿಲ್ಲ, ಬದಲಾಗಿ ಸೂತರಾಗುತ್ತಾರೆ. ಶಕುಂತಲೆ ಕ್ಷತ್ರಿಯನಾದ ಕೌಶಿಕ ಮತ್ತು ಅಪ್ಸರೆಯಾದ ಮೇನಕೆಯಿಂದ ಹುಟ್ಟಿದುದರಿಂದ ಅವಳು ಕ್ಷತ್ರಿಯನನ್ನು ಮದುವೆಯಾಗಲು ಯೋಗ್ಯಳು).

ಸನಾತನಧರ್ಮದ ಅನೇಕ ಆಯಾಮಗಳಲ್ಲಿ ಆಶ್ರಮವ್ಯವಸ್ಥೆಯೂ ಒಂದು. ಹೇಗೆ ಮನುಷ್ಯ ಶೈಶವ-ಯೌವನ-ವಾರ್ಧಕ್ಯಗಳನ್ನು ಹೊಂದುತ್ತಾನೆಯೋ ಅಷ್ಟೇ ಸಹಜವಾದ ರೀತಿಯಲ್ಲಿ ಬ್ರಹ್ಮಚರ್ಯ-ಗಾರ್ಹಸ್ಥ್ಯ-ವಾನಪ್ರಸ್ಥ ಎಂಬ ಆಶ್ರಮಗಳು ನಿಯತವಾಗಿವೆ.

ರಘುವಂಶದ ಆರಂಭದಲ್ಲಿ ರಘುವಂಶದವರ ಸದ್ಗುಣಗಳನ್ನು ಬಣ್ಣಿಸುವ ಒಂದು ಕುಲಕದಲ್ಲಿ ಹೀಗೆ ಹೇಳುತ್ತಾನೆ.
ಶೈಶವೇSಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ |
ವಾರ್ಧಕ್ಯೇ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಮ್ ||
'ಶೈಶವದಲ್ಲಿ ವಿದ್ಯೆಯನ್ನು ಅಭ್ಯಸಿಸಿ, ಯೌವನದಲ್ಲಿ ವಿಷಯಗಳನ್ನು ಇಚ್ಛಿಸಿ, ವಾರ್ಧಕ್ಯದಲ್ಲಿ ಮುನಿವೃತ್ತಿಯನ್ನು ಕೈಗೊಂಡು, ಅಂತ್ಯದಲ್ಲಿ ಯೋಗದಿಂದ ಶರೀರವನ್ನು ತ್ಯಜಿಸುವವರ (ವಂಶವನ್ನು ಕುರಿತು ವರ್ಣಿಸುತ್ತೇನೆ).

ಮೇಲಿನದು ನಮ್ಮ ಮುಂದಿರುವ ಆದರ್ಶ. ಶೈಶವದಲ್ಲಿ ವಿದ್ಯಾರ್ಜನೆ ಮಾಡದಿದ್ದರೆ ಎಷ್ಟು ತಪ್ಪೋ, ಯೌವನದಲ್ಲಿ ಗೃಹಸ್ಥರಾಗದಿರುವುದೂ ಅಷ್ಟೇ ತಪ್ಪು. ಇನ್ನು ವಾನಪ್ರಸ್ಥದ ಬಗ್ಗೆ ಹೇಳುವುದಾದರೆ ಈಗಿನ ಕಾಲದಲ್ಲಿಯೂ ಅದೊಂದು ಆವಶ್ಯಕವಾದ, ಮುಖ್ಯವಾದ ಆಶ್ರಮ. ವನಗಳಲ್ಲಿ ಹೋಗಿ ವಾಸ ಮಾಡುವುದು ಈಗ ಸಾಧ್ಯವಿಲ್ಲದಿದ್ದರೂ ವಯಸ್ಸಾದಾಗ ಶಾಂತಚಿತ್ತರಾಗಿ ತತ್ತ್ವಜಿಜ್ಞಾಸೆಯನ್ನು ಮೈಗೂಡಿಸಿಕೊಳ್ಳುವುದು ಆರೋಗ್ಯದೃಷ್ಟ್ಯಾ ಹಿತಕರ, ಸಾಮಾಜಿಕದೃಷ್ಟ್ಯಾ ಶ್ರೇಯಸ್ಕರ.

ವರತಂತುವಿನ ಶಿಷ್ಯನಾದ ಕೌತ್ಸ ರಘುಮಹಾರಾಜನ ಹತ್ತಿರ ಗುರುದಕ್ಷಿಣೆಯನ್ನು ಬೇಡಲು ಬಂದಾಗ ರಘುವು ಅವನನ್ನು ಕುಶಲ ವಿಚಾರಿಸುವಾಗ ಹೀಗೆ ಕೇಳುತ್ತಾನೆ.
ಅಪಿ ಪ್ರಸನ್ನೇನ ಮಹರ್ಷಿಣಾ ತ್ವಂ ಸಮ್ಯಗ್ವಿನೀಯಾನುಮತೋ ಗೃಹಾಯ |
ಕಾಲೋ ಹ್ಯಯಂ ಸಂಕ್ರಮಿತುಂ ದ್ವಿತೀಯಂ ಸರ್ವೋಪಕಾರಕ್ಷಮಮಾಶ್ರಮಂ ತೇ||
(ನಿನ್ನ ವಿದ್ಯಾರ್ಜನೆಯಿಂದ) ಪ್ರಸನ್ನನಾದ ಮಹರ್ಷಿಯಿಂದ ಮದುವೆಯಾಗಲು ಅನುಮತಿಯನ್ನು ಪಡೆದಿರುವೆ ತಾನೆ? ಎಲ್ಲರ ಉಪಕಾರವನ್ನು ಮಾಡಲು ಸಾಧ್ಯವಾಗುವ ಎರಡನೆಯ ಆಶ್ರಮವನ್ನು ಕ್ರಮಿಸಲು ಇದೇ ನಿನಗೆ ಸಕಾಲ!

ಮೇಲಿನ ಶ್ಲೋಕದಲ್ಲಿ ಎರಡು ಅಂಶಗಳು ಮನನೀಯ. ಒಂದು - ಗೃಹಸ್ಥಾಶ್ರಮವನ್ನು 'ಸರ್ವೋಪಕಾರಕ್ಷಮ' ಎಂದು ವರ್ಣಿಸಿರುವುದು. ಗೃಹಸ್ಥರು ಕೇವಲ ತಮ್ಮ ಕುಟುಂಬದ ಸೌಖ್ಯವನ್ನು ಗಮನಿಸಿದರೆ ಸಾಲದು. ಬೇರೆಯ ಆಶ್ರಮದವರ ಪಾಲನ ಗೃಹಸ್ಥನ ಮುಖ್ಯಕರ್ತವ್ಯಗಳಲ್ಲಿ ಒಂದು.
ಹಾಗೆಯೇ, ಇಲ್ಲಿ ತುಂಬ ಮಾರ್ಮಿಕವಾದ ಪದ 'ಸಂಕ್ರಮಿತುಂ'. ಚೆನ್ನಾಗಿ ಕ್ರಮಿಸುವುದು ಎಂದು ಈ ಪದದ ಅರ್ಥ. ಇಲ್ಲಿಯ ಧ್ವನಿಯೇನೆಂದರೆ, ಈ ಆಶ್ರಮ ಕೇವಲ ಒಂದು ಮಾರ್ಗ, ಇಲ್ಲಿ ನೆಲೆ ನಿಲ್ಲಲಾಗದು ಎಂದು. ಗೃಹಸ್ಥಾಶ್ರಮವನ್ನು ಚೆನ್ನಾಗಿ ಕ್ರಮಿಸಿದರೆ ಅದೇ ವಾನಪ್ರಸ್ಥಕ್ಕೆ ದಾರಿಯಾಗುತ್ತದೆ.

ಹಾಗೆಯೇ, ಶಕುಂತಲೆ ಪತಿಗೃಹಕ್ಕೆ ತೆರಳುವಾಗ ತಂದೆಯನ್ನು ಬಿಟ್ಟು ಹೋಗಲಾಗದೆ ದುಃಖಿಸುತ್ತಿದ್ದಾಗ ಕಣ್ವ ಹೇಳುವುದು ಇದು
ಭೂತ್ವಾ ಚಿರಾಯ ಚತುರಂತಮಹೀಸಪತ್ನೀ ದೌಷ್ಯಂತಮಪ್ರತಿರಥಂ ತನಯಂ ನಿವೇಶ್ಯ |
ಭರ್ತ್ರಾ ತದರ್ಪಿತಕುಟುಂಬಭರೇಣ ಸಾರ್ಧಂ ಶಾಂತೇ ಕರಿಷ್ಯಸಿ ಪದಂ ಪುನರಾಶ್ರಮೇSಸ್ಮಿನ್ ||
ಬಹಳಕಾಲ ಭೂಮಿಯ ಸವತಿಯಾಗಿ (ಎಂದರೆ ರಾಜ್ಞಿಯಾಗಿ), ಎದುರಿಲ್ಲದ ದೌಷ್ಯಂತ (ದುಷ್ಯಂತನ ಮಗ)ನಿಗೆ ಕುಟುಂಬದ ಭಾರವನ್ನು ಅರ್ಪಿಸಿ, ಗಂಡನ ಜೊತೆಯಲ್ಲಿ ಮತ್ತೆ ಈ ಶಾಂತವಾದ ಆಶ್ರಮಕ್ಕೇ ಬರುತ್ತೀಯೆ.

ಕೇವಲ ಒಂದೇ ಶ್ಲೋಕದಲ್ಲಿ ಕಣ್ವರು ಶಕುಂತಲೆಗೆ ಅವಳ ಈಗಿನ ಕರ್ತವ್ಯವನ್ನೂ, ಮುಂದಿನ ಕರ್ತವ್ಯವನ್ನೂ ಎಷ್ಟು ಚೆನ್ನಾಗಿ ಹೇಳಿದ್ದಾರಲ್ಲವೆ?

ಇನ್ನು ಆಶ್ರಮವ್ಯವಸ್ಥೆಯ ಬಗ್ಗೆ ಎರಡು ಮಾತು. ಬ್ರಹ್ಮಚರ್ಯ ವಿದ್ಯಾರ್ಜನೆಗೆ ಮೀಸಲಾದುದು. ವಿದ್ಯಾರ್ಜನೆಗೆ ತೊಂದರೆಯುಂಟುಮಾಡುವ, ಭೋಗಾಸಕ್ತಿಯನ್ನುಂಟುಮಾಡುವ ಎಲ್ಲ ವಿಷಯಗಳೂ ವಸ್ತುಗಳೂ (ಸುಗಂಧ, ತಾಂಬೂಲ ಇತ್ಯಾದಿ) ಬ್ರಹ್ಮಚಾರಿಗಳಿಗೆ ನಿಷಿದ್ಧ. ಹಾಗೆಯೇ ಗಾರ್ಹಸ್ಥ್ಯದಲ್ಲಿ ವಿಷಯಸುಖಗಳ ಅನುಭವದ ಜೊತೆಯಲ್ಲಿ ಅತಿಥಿಸತ್ಕಾರ, ನಿತ್ಯಾಗ್ನಿಹೋತ್ರ ಮುಂತಾದ ಕೆಲಸಗಳಿಗೆ ಪ್ರಾಶಸ್ತ್ಯ. ಅನಂತರ ಮಕ್ಕಳು ದೊಡ್ಡವರಾದ ಮೇಲೆ ಸಂಸಾರದ ಭಾರವನ್ನು ಅವರಿಗೊಪ್ಪಿಸಿ ಆತ್ಮಚಿಂತನೆಯಲ್ಲಿ ಕಾಲ ಕಳೆಯುವ ವಾನಪ್ರಸ್ಥಾಶ್ರಮ.

ವರ್ಣಸಂಕರಕ್ಕಿಂತ ಆಶ್ರಮಸಂಕರ ಮನುಷ್ಯನ ಮೇಲೆ ಮತ್ತು ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯೆಂದು ನನ್ನ ಭಾವನೆ. ಸಂಕರವೆಂದರೆ ಒಂದು ಆಶ್ರಮದವರು ಮತ್ತೊಂದು ಆಶ್ರಮದವರ ಚಟುವಟಿಕೆಗಳನ್ನು ತಮ್ಮದಾಗಿಸಿಕೊಳ್ಳುವುದು. ಇಂದು ಹೈಸ್ಕೂಲಿನಲ್ಲಿಯೇ ಮಕ್ಕಳು ವಿಚಿತ್ರಪ್ರಲೋಭನೆಗಳಿಗೆ ಒಳಗಾಗಿ, ಅವರ ವಿದ್ಯಾರ್ಜನೆ ಸಮಾಧಾನಕರವಾಗಿ ಇರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಶಿಸ್ತು-ಸಂಯಮಗಳನ್ನು ಕಲಿಯದ, ಬೌದ್ಧಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಸಬಲರಾಗುವ ದಾರಿಯನ್ನು ತಿಳಿಯದ ಮಕ್ಕಳು ಬೆಳೆದು ಹೇಗೆ ಒಳ್ಳೆಯ ಗೃಹಸ್ಥರಾಗಬಲ್ಲರು? ಹಾಗೆಯೇ, ತೃಪ್ತಿಯಿಲ್ಲದ ಗೃಹಸ್ಥಜೀವನವನ್ನು ಕಳೆದವರಿಗೆ ನೆಮ್ಮದಿಯ ವಾನಪ್ರಸ್ಥಾಶ್ರಮ ಪಲಾಯನದಂತೆಯೇ ಕಾಣುತ್ತದೆಯಲ್ಲವೇ? ತಮ್ಮ ಮೇರುಕೃತಿಯಾದ 'ಮಹಾದರ್ಶನ'ದಲ್ಲಿ ದೇವುಡು ರವರು ಒಂದು ಸುಂದರವಾದ ಮಾತನ್ನು ಹೇಳುತ್ತಾರೆ -'ವೈರಾಗ್ಯವೆಂದರೆ ಬೇಡವೆಂದು ನೂಕುವುದಲ್ಲ, ಸಾಕೆಂದು ವಿಮುಖವಾಗುವುದು' ಎಂದು. ವಾರ್ಧಕ್ಯದಲ್ಲಿ ಈ ತೃಪ್ತಿಸಮಾಧಾನಗಳು ಬರಬೇಕಾದರೆ ಒಳ್ಳೆಯ ಶೈಶವ-ಯೌವನಗಳು ಆವಶ್ಯಕ. ಹಾಗಾಗಿ, ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಚೆನ್ನಾಗಿರಬೇಕಾದರೆ ಆಶ್ರಮವ್ಯವಸ್ಥೆಯನ್ನು ಯಥಾಶಕ್ತಿ, ಯಥಾಸ್ಥಿತಿ ಕಾಪಾಡಿಕೊಳ್ಳುವುದು ಆವಶ್ಯಕ.

|| ಇತಿ ಶಮ್||