ಕಳೆವ ಮುನ್ನವೆ ಹೊತ್ತು, ಓಡೋಡಿ ಹೋಗದಿರಿ
ಎಳೆಬಿಸಿಲ ತಂಪಿನಲಿ ನಗುವ ಹೂವುಗಳೇ !
ಅಳುವುಕ್ಕುವುದು ನೀವು ಸೊರಗುವುದ ನೋಡುತ್ತೆ
ನಳನಳಿಸಿ ಗಿಡಗಳಲಿ ನವಸುಮಗಳೇ! !
ತಡೆಯಿರೈ! ನಿಲ್ಲಿರೈ! ಸಂಜೆಯಾಗುವ ತನಕ
ಪಡುವಣದಿ ರವಿತೇಜ ಮರೆಯಾಗುವನಕ
ಕೂಡಿ ನಿಮ್ಮನು ನಾವು ಬರುವೆವೈ, ನಮ್ಮೊಡನೆ
ಮಾಡಿ ನೀವ್ ಸಂಧ್ಯೆಯೊಳಗರ್ಚನೆಯನು
ನಿಮ್ಮಂತೆ ಕ್ಷಣಿಕವೈ ನಮ್ಮ ಬಾಳೂ ಕೂಡ
ನಮ್ಮಯ ವಸಂತವೂ ಚಿರವಲ್ಲವಲ್ಲ!
ನಮ್ಮ ಜವದೇಳಿಗೆಗೆ ಜವರಾಯ ಕಾದಿರುವ
ಎಮ್ಮ ತೆರವೂ ಕೂಡ ನಿಮ್ಮಂತೆಯೇ
ಮುಗಿಸುವೆವು ನೀವು ಜೀವನ ಮುಗಿಸುವಂತೆ, ಬೇ
ಸಗೆಯ ಮಳೆ ಧರಣಿಯಿಂದಾವಿಯಾದಂತೆ
ನಗುವೆಲೆಯ ಮೇಲಿನಿಬ್ಬನಿಯ ಮುತ್ತುಗಳೆಲ್ಲ
ಮುಗಿಲ ಮಡಿಲನು ಸೇರಿ ಕಾಣೆಯಾದಂತೆ ||