ಈಗ್ಗೆ ಒಂದು ವಾರದ ಹಿಂದೆ ನಮ್ಮ ಮನೆಯಲ್ಲಿ ಅನಾಹೂತ, ಅನಪೇಕ್ಷಿತ ಅತಿಥಿಯ ಆಗಮನವಾಯಿತು. ಈ ಅತಿಥಿ ನಮ್ಮ ಮನೆಯನ್ನು ದರ್ಶಿಸಿದುದು ನಮಗೆ ತಿಳಿದದ್ದು ರಾತ್ರಿ ಮೇಜಿನ ಮೇಲೆ ಇಟ್ಟ ಒಂದು ಬಟ್ಟಲು ನಡುರಾತ್ರಿಯಲ್ಲಿ ಕೆಳಗೆ ಬಿದ್ದು ಠಳ್ ಎಂದು ಸದ್ದು ಮಾಡಿದಾಗ; ಮರುದಿನದ ಅಡುಗೆಗಾಗಿ ಅಡುಗೆಮನೆಯ ಕಟ್ಟೆಯ ಮೇಲಿಟ್ಟಿದ್ದ ಟೊಮೇಟೋ ಒಂದರಲ್ಲಿ ಕೈಬೆರಳಷ್ಟು ಅಗಲದ ಡೊಗರು ಬಿದ್ದದ್ದು ಕಂಡಾಗ; ಇಷ್ಟೂ ಆದಮೇಲೆ ಖಾತರಿಯಾದದ್ದು ಮಧ್ಯರಾತ್ರಿಯಲ್ಲಿ ಬಾಯಾರಿಕೆಗೆ ನೀರನ್ನು ಬಗ್ಗಿಸಿಕೊಳ್ಳಲು ಅಡುಗೆಮನೆಯ ದೀಪ ಹಾಕಿದಾಗ ಗಾಬರಿಗೊಂಡು ನಮ್ಮನ್ನೇ ನೋಡುತ್ತಿದ್ದ ಚಿಕ್ಕ ಚಿಕ್ಕ ಕಪ್ಪು ಕಣ್ಣುಗಳನ್ನು ನೋಡಿದಾಗ.
ನಾನು ಚಿಕ್ಕವಳಿದ್ದಾಗ ಇಲಿಯ ಬಾಲವನ್ನು ನನ್ನ ಕೈಯಾರೆ ಹಿಡಿದು ಅದನ್ನು ಹೊರಗೆ ಬಿಸಾಡಿದ್ದು ನೆನಪಿಲ್ಲವಾದರೂ, ಯಾರಾದರೂ "ಏ ನೀನು ಹಾಗೆ ಬಿಸಾಡಿದ್ದನ್ನು ನಾನೇ ನೋಡಿದ್ದೇನೆ" ಎಂದು ಹೇಳಿದರೆ ಒಪ್ಪಿಕೊಳ್ಳಲೇಬೇಕಾದಂತಹ ಬಾಲ್ಯ ನನ್ನದು. ಹಳೆಯ ಕಾಲದ ಮನೆಯಲ್ಲೇ ಬಾಲ್ಯವನ್ನು ಕಳೆದ ನನಗೆ ಮನೆಯಲ್ಲಿ ಇಲಿಯನ್ನು ಕಂಡದ್ದು ಒಂದು ದೊಡ್ಡ ವಿಷಯವಾಗಬಾರದಿತ್ತು. ಆದರೂ, ಜಿರಳೆಗಳೂ ಕಾಣದ ಮನೆಯಲ್ಲಿ ಇಷ್ಟು ವರ್ಷಗಳನ್ನು ಕಳೆದ ಸಂಸ್ಕಾರದಿಂದ ನೆನೆದ ಮನಸ್ಸಿಗೆ ಇಲಿಯ ಮೈಯಲ್ಲಿ ಹುಲಿಯ ಅಳವೇ ಕಂಡುಬಿಟ್ಟಿತು. ಪ್ರತಿರಾತ್ರಿ ಅಡುಗೆಮನೆಯ ಕಟ್ಟೆಯ ಮೇಲಿಡುತ್ತಿದ್ದ ಆಹಾರಪದಾರ್ಥಗಳನ್ನು ದೂರದಲ್ಲಿದ್ದ ಮೇಜಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಬಟ್ಟೆಗಳ ನಡುವೆ ಇಲಿ(ಗಳು) ಹೊಕ್ಕರೆ ಕಷ್ಟವೆಂದು ಕೋಣೆಗಳ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವ ಪರಿಪಾಟಿಯೂ ಮೊದಲಾಯಿತು. ಮನೆಯ ಕಟ್ಟಡದಲ್ಲಿ ಅದುವರೆಗೂ ಕಾಣದಿದ್ದ ಶೈಥಿಲ್ಯಗಳು ಕಾಣತೊಡಗಿದವು. ಇಲಿ(ಗಳು) ಬರುವ, ಬರಬಹುದಾದ ದ್ವಾರಗಳನ್ನೆಲ್ಲ ಮುಚ್ಚುವುದು ಹೇಗೆಂಬ ವಾಗ್ವಾದವೂ ನಡೆಯಿತು. ಕಡೆಗೆ ನಮ್ಮ ಕೈಯಲ್ಲಿ ಇಲಿಯ ನಿಗ್ರಹ ಸಾಧ್ಯವಿಲ್ಲವೆಂಬ ಹತಾಶಾಭಾವವೂ ಉದಿಸಿಬಿಟ್ಟಿತು.
ನಮ್ಮ ಮನೆಗೆ ಅಡುಗೆ ಕೆಲಸಕ್ಕೆ ಸಹಾಯಕ್ಕಾಗಿ ಬರುವಾಕೆ ಆಗ ಒಂದು ವಿಶೇಷವಾದ ರಟ್ಟಿನ ಬಗ್ಗೆ ಹೇಳಿದರು. ಇಲಿ ಬರುವ ದಾರಿಯಲ್ಲಿ ಅದನ್ನು ಇರಿಸಿದರೆ ಆ ರಟ್ಟಿಗೆ ಅದು ಅಂಟಿಕೊಂಡುಬಿಡುತ್ತದೆ; ತದನಂತರ ಅದನ್ನು ಬಿಸಾಡಬಹುದು ಎಂದು ಹೇಳಿದರು. ಸ್ವಲ್ಪ ಕಡಿಮೆ ಹಿಂಸಾತ್ಮಕವಾದ ಉಪಾಯ ಎಂದು ಮನಸ್ಸಿಗೇನೋ ಒಪ್ಪಿತು, ಆದರೆ ಕಾರ್ಯರೂಪಕ್ಕೆ ತರಲು ಸುಲಭವಲ್ಲ ಎಂದು ಪ್ರಯತ್ನಿಸಿದಾಗ ತಿಳಿಯಿತು. ಮೊದಲನೆಯ ದಿನ ನಾವು ಅದನ್ನು ಸೆಳೆಯಲು ಇಟ್ಟಿದ್ದ ಟೊಮೇಟೊ ಹಣ್ಣು ತಾಜಾ ಅಲ್ಲವೆಂದು ಅದಕ್ಕೆ ತಿಳಿದುಹೋಯಿತೋ ಏನೋ, ನಾವು ರಟ್ಟನ್ನಿಟ್ಟ ಸ್ಥಳಕ್ಕೆ ಇಲಿ ಬರಲೇ ಇಲ್ಲ. ಮತ್ತೆರಡು ದಿನ ಹೀಗೇ ಆಯಿತು. ಕಡೆಗೆ ಇದು ನಮ್ಮಿಂದ ಆಗುವ ಕೆಲಸವಲ್ಲವೆಂದು ನಮ್ಮ ಮಾವನವರು ಒಣಕೊಬ್ಬರಿಯ ಚೂರನ್ನು ಸುಟ್ಟು, ರಟ್ಟಿನ ಪಕ್ಕದಲ್ಲಿ ಇಟ್ಟರು. ಆ ರಾತ್ರಿ ಇಲಿ ರಟ್ಟಿನಲ್ಲಿ ಸಿಕ್ಕಿಬಿದ್ದಿತು. ನಮ್ಮ ಮಾವನವರು ಮಧ್ಯರಾತ್ರಿಯಲ್ಲೇ ಅದನ್ನು ಎತ್ತಿ ಬಿಸಾಡಿಬಿಟ್ಟರು. ಅಲ್ಲಿಗೆ ಆ ಇಲಿಯ ಕಥೆ ಮುಗಿಯಿತು.
ಬೆಳಗ್ಗೆ ಎದ್ದ ನಮಗೆ ಇಲಿ ಸಿಕ್ಕಿಬಿದ್ದು ಸತ್ತ ವಿಷಯ ತಿಳಿಯಿತು. ನಿಜವಾಗಿಯೂ ನಮಗೆ ಆಗಬೇಕಾಗಿದ್ದು ಸದ್ಯ ಪೀಡೆ ಕಳೆಯಿತಲ್ಲ ಎಂಬ ನೆಮ್ಮದಿ. ಆದರೆ ನಮಗಾಗಿದ್ದು ಖೇದ. ದಿನವೂ ಮನೆಯ ಮುಂದೆ ಅರಳಿದ ಹೂವುಗಳನ್ನು ಕಳ್ಳತನದಲ್ಲಿ ಬಿಡಿಸಿಕೊಂಡು ಹೋಗುವ ಮುದುಕ ಒಂದಷ್ಟು ದಿನ ಬರದಿದ್ದರೆ “ಅಯ್ಯೋ ಆ ಮುದುಕನನ್ನು ನೋಡಿ ಸುಮಾರು ದಿನವಾಯಿತು; ಕೋವಿಡ್ ಸಮಯ ಬೇರೆ. ಪಾಪ ಆರೋಗ್ಯವಾಗಿದ್ದಾರೋ ಇಲ್ಲವೋ” ಎಂದು ಚಡಪಡಿಸುವ ಮನೆಯವರಂತೆ ನಮ್ಮ ಪರಿಸ್ಥಿತಿಯಾಯಿತು. ದಿಟವೇ, ಇಲಿಯ ಕಾಟದಿಂದ ನಮ್ಮ ರಾತ್ರಿಯ ನಿದ್ರೆಗೆ ಭಂಗ ಬರುತ್ತಿತ್ತು. ಸಣ್ಣ ಶಬ್ದಕ್ಕೂ ಇಲಿ ಎಲ್ಲಿ ನುಗ್ಗಿ ಏನು ರಾದ್ಧಾಂತ ಮಾಡುವುದೋ ಎಂದು ಎದೆ ಡವಡವಗುಟ್ಟುತ್ತಿತ್ತು. ಆದರೂ ಅದು ಸತ್ತ ಮೇಲೆ “ಛೆ, ಅದನ್ನು ಬೋನಿನಲ್ಲಿ ಹಿಡಿದು ಹೊರಗೆ ಬಿಟ್ಟಿದ್ದಿದ್ದರೆ ಬದುಕಿಕೊಳ್ಳುತ್ತಿತ್ತೋ ಏನೋ!” ಎಂದು ಪೇಚಾಡುವಂತೆ ಆಯಿತು. ವಸ್ತುತಃ ಬೀದಿನಾಯಿಗಳಂತೆ ಬೀದಿಬೆಕ್ಕುಗಳೂ ಹೇರಳವಾಗಿರುವ ನಮ್ಮ ಮನೆಯ ಸುತ್ತಮುತ್ತ ಇಲಿಯ ಪಾಲಿಗಿದ್ದ ಯೋಗಕ್ಷೇಮವೂ ಅಷ್ಟಕ್ಕಷ್ಟೇ. ಆದರೆ ಮನುಷ್ಯಸ್ವಭಾವಕ್ಕನಗುಣವಾಗಿ “ಚಿಂತನೇ ಕಾ ದರಿದ್ರತಾ” ಎಂದು ನಮ್ಮ ಆಲೋಚನಾಲಹರಿಗಳೂ ಆಣೆಕಟ್ಟಿಲ್ಲದ ನದಿಯಂತೆ ಹರಿದವು.
ನಮ್ಮ ಎದುರಿನ ಜೀವಿ ದೊಡ್ಡದಾದಷ್ಟೂ ನಮಗೆ ಅದನ್ನು ಹಿಂಸಿಸಿದಾಗ ಆಗುವ ಕಸಿವಿಸಿ ದೊಡ್ಡದಾಗುತ್ತದೆ. ಸೊಳ್ಳೆಯನ್ನು ಹೊಡೆಯುವಾಗ ಇಲ್ಲದ ಭೂತದಯೆ ಇಲಿಯನ್ನು ಸಾಯಿಸುವಾಗ, ಅಥವಾ ಬೀದಿನಾಯಿಗಳನ್ನು ಮುನಿಸಿಪಾಲಿಟಿ ಹಿಡಿದುಕೊಂಡು ಹೋದಾಗ ಉಕ್ಕಿ ಬಂದುಬಿಡುತ್ತದೆ. ಅಷ್ಟೇಕೆ, ಮಾಸ್ತಿಯವರ ಒಂದು ಸಣ್ಣ ಕಥೆಯೇ ಇದೆಯಲ್ಲ - ಶಿಷ್ಯನೊಬ್ಬನಿಗೆ ಜೀವದ ಮಹತ್ತ್ವವನ್ನು ತಿಳಿಸಲು ಕಾರಿನ ಮುಂದೆ ಹರಿಯುತ್ತಿದ್ದ ಇರುವೆಯನ್ನು ದೊಡ್ಡ ಗಾತ್ರದ್ದನ್ನಾಗಿ ಮಾಡಿ ತೋರಿಸುವ ಗುರುವಿನ ಶಿಕ್ಷಣದ ಅಪೂರ್ವವಾದ ಪರಿಯ ಬಗ್ಗೆ ! ನಮ್ಮನಿಮ್ಮೆಲ್ಲರಿಗೂ ಈ ಕಥೆ ಅನ್ವಯಿಸಬಹುದೇನೋ !
ನಮ್ಮ ಇಲಿ ಸತ್ತಾಗ ಯಾವುದಾದರೂ ರೀತಿಯಲ್ಲಿ ಅದರಲ್ಲಿ ನಮ್ಮ ಪಾತ್ರವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದೆ. ಆಗ ರಾಮಕೃಷ್ಣಪರಮಹಂಸರ ಒಂದು ಕಥೆ ನನಗೆ ನೆನಪಾಯಿತು. ಅವರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಪ್ರೇಮಾನಂದರು (ಆಗಿನ್ನೂ ಬಾಬುರಾಮ) ಅತ್ಯಂತ ಭೂತದಯಾಪರರಾಗಿದ್ದರು. ಒಮ್ಮೆ ಆತ ಧ್ಯಾನ ಮಾಡಲುದ್ಯುಕ್ತನಾದಾಗ ಸೊಳ್ಳೆಗಳ ಹಾವಳಿ ಹೆಚ್ಚಾಗಿತ್ತು. ಎಲ್ಲ ಪ್ರಾಣಿಗಳ ಬಗ್ಗೆಯೂ ಅತೀವ ದಯೆಯುಳ್ಳ ಆತನಿಗೆ ಅವುಗಳನ್ನು ಕೊಲ್ಲಲು ಮನಸ್ಸು ಬರಲಿಲ್ಲ. ಧ್ಯಾನವನ್ನು ಮಾಡಲಾಗದೆ, ಸೊಳ್ಳೆಗಳನ್ನೂ ಕೊಲ್ಲಲಾಗದೆ ವ್ಯಗ್ರತೆಯಿಂದಲೇ ಪರಮಹಂಸರ ಬಳಿ ತೆರಳಿದರು. ಅವರು ಆಗ ತಮ್ಮ ಹಾಸಿಗೆಯಲ್ಲಿ ಸೇರಿಕೊಂಡಿದ್ದ ತಿಗಣೆಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುತ್ತಿದ್ದರು. ತಮ್ಮ ಶಿಷ್ಯ ಕಂಡೊಡನೆಯೇ “ಹಾಳು ತಿಗಣೆಗಳು! ನೆಟ್ಟಗೆ ನಿದ್ದೆ ಮಾಡಲೂ ಧ್ಯಾನ ಮಾಡಲೂ ಬಿಡುವುದಿಲ್ಲ!” ಎಂದು ಹಳಿದರು. ಶಿಷ್ಯನಿಗೆ ಬೇಕಾದ ಪಾಠ ಕಲಿಯಲು ಸಿಕ್ಕಿತು.
ಅದು ಸರಿ, ಆದರೆ ಪ್ರೇಮಾನಂದರ ಬದಲಿಗೆ ಬೇರೆ ಯಾರಾದರೂ ಇದ್ದಿದ್ದರೆ? ಉದಾಹರಣೆಗೆ ಗಿರೀಶ್ ಚಂದ್ರ ಘೋಷರೋ, ಸ್ವಾಮಿ ವಿವೇಕಾನಂದರೋ ಇದ್ದಿದ್ದರೆ ಪರಮಹಂಸರ ಉಪದೇಶ ಯಾವ ರೀತಿಯಲ್ಲಿ ಇರುತ್ತಿತ್ತೋ? ಪ್ರಾಯಶಃ ಅವರು ತಿಗಣೆಗಳಿಂದ ಕಚ್ಚಿಸಿಕೊಂಡು, ಮೂಷಿಕಗಳಿಗೆ ಕೈಯಾರೆ ಹಣ್ಣನ್ನು ತಿನ್ನಿಸುವ ಮೂಲಕ ಈ ಶಿಷ್ಯರಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರೇನೋ ! ಪರಮಹಂಸರೇ ಹೇಳಿದರೆನ್ನಲಾದ ಒಂದು ಕಥೆ ಹೀಗಿದೆ - ಒಮ್ಮೆ ಮಗುವಾದ ಗಣೇಶ ಬಾಲಬುದ್ಧಿಯಿಂದ ಒಂದು ಬೆಕ್ಕನ್ನು ಹಿಂಸಿಸಿದನಂತೆ. ಮರಳಿ ಬಂದಾಗ ತನ್ನ ತಾಯಿಯಾದ ಜಗದಂಬಿಕೆಯ ದೇಹದಲ್ಲಿಯೂ ಬಾಸುಂಡೆಗಳು ಕಂಡವಂತೆ. ಮಗುವಾದ ಗಣೇಶನಿಗೆ ಆಗ ಚರಾಚರವಸ್ತುಗಳೆಲ್ಲದರಲ್ಲೂ ಭಗವತಿಯನ್ನೇ ಕಾಣಬೇಕೆಂದು ಅರಿವಾಯಿತಂತೆ. ಇಂತಹ ಕಥೆಯೊಂದನ್ನು ಬೋಧಿಸುವವರು ತಿಗಣೆಗಳನ್ನು ಹೆಕ್ಕಿ ಹೆಕ್ಕಿ ಸಾಯಿಸುವುದರೆಂದರೇನು? ನಮ್ಮಲ್ಲೂ ಒಂದು ಮಟ್ಟದ ಸ್ವಾರ್ಥ - ನಮ್ಮ ದೇಹಕ್ಕಾಗಲಿ, ಮನಸ್ಸಿಗಾಗಲಿ ಹಿಂಸೆಯಾದರೆ ತಿಳಿದೋ ತಿಳಿಯದೆಯೋ ಹಿಂಸಿಸುತ್ತಿರುವ ಜೀವಿಯಿಂದ ಪಾರಾಗಿ ಸಮಾಧಾನದಿಂದಿರಬೇಕೆಂಬ ಸ್ವಾರ್ಥ - ಇರಬೇಕೆಂದಲ್ಲವೇ? ಅಷ್ಟೂ ಇಲ್ಲದೆ ನಾವು ಸಂಸಾರಿಗಳಾಗಿರಲು ಸಾಧ್ಯವೇ?
ಚಿಕ್ಕಂದಿನಲ್ಲಿ ನನಗೆ ಒಬ್ಬ ಜೈನ ಸ್ನೇಹಿತೆಯಿದ್ದಳು. ಅವಳ ತಲೆಯ ತುಂಬ ಹೇನು. ಹೇನುಗಳನ್ನು ಹೆಕ್ಕಿ ಕೊಲ್ಲುವುದು ಅವರ ಧರ್ಮದಲ್ಲಿ ನಿಷಿದ್ಧವಂತೆ, ಅದರಿಂದ ಹಾಗೆಯೇ ಶಾಲೆಗೆ ಬರುತ್ತಿದ್ದಳು. ಅವಳ ಕೈ ಸದಾ ತಲೆಯಲ್ಲಿಯೇ ಇರುತ್ತಿತ್ತು. ಅವಳನ್ನು ನೆನೆದರೆಯೇ ನನಗೆ ಕೂದಲಿನಲ್ಲಿ ನವೆಯಾಗುತ್ತದೆ. ಆದರೆ ಅವಳ ಮನೆಯವರು ಲೇವಾದೇವಿಗಾರರು. ಹಿಂಸೆ ಇವರ ಮನೆಯಲ್ಲಿ ಕೇವಲ ಸ್ವರೂಪವನ್ನು ಬದಲಾಯಿಸಿಕೊಂಡಿತ್ತೇ ಹೊರತು ಇಲ್ಲವೆಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ನಾವೆಲ್ಲ ಆಡಿಕೊಂಡು ನಗುತ್ತಿದ್ದೆವು. ಇಲ್ಲಿ ಹೇಳಹೊರಟಿದ್ದೇನೆಂದರೆ ತೀರ ಸರಳವಾಗಿ ಗೀಟು ಹಾಕಿದ ಹಾಗೆ ಇದು ಹಿಂಸೆ, ಇದು ಹಿಂಸೆಯಲ್ಲ, ಪ್ರಾಣಿಹಿಂಸೆ ಅಧರ್ಮ, ಅದನ್ನು ಮಾಡಲೇಬಾರದು ಎಂದೆಲ್ಲ ವಿಧಿಸಿದರೆ ಅದು ಅಸಾಧ್ಯ, ಅಸಾಧು.
ಸನಾತನಧರ್ಮದಲ್ಲಿ ಅಹಿಂಸೆಗೆ ಸ್ಥಾನವಿರುವಂತೆ ಹಿಂಸೆಗೂ ಸ್ಥಾನವಿದೆ. ಮಹಾಭಾರತದ್ದು ಎಂದು ಹೇಳಲಾಗುವ, ಆದರೆ ಭಾಗಶಃ ಮಾತ್ರ ಮಹಾಭಾರತದ್ದಾದ “ಅಹಿಂಸಾ ಪರಮೋ ಧರ್ಮಃ ಧರ್ಮಹಿಂಸಾ ತಥೈವ ಚ” ಎಂಬುದು ನಮಗೆ ಅನುಕರಣೀಯ. ತಮ್ಮ ತಮ್ಮ ಮನೆಗಳನ್ನೂ ರಾಜ್ಯಗಳನ್ನೂ ರಕ್ಷಿಸಿಕೊಳ್ಳಲು ಹಿಂಸೆಯನ್ನು ಆಶ್ರಯಿಸಬೇಕಾದಾಗ ಪ್ರಾಕೃತಕಾರುಣ್ಯದಿಂದ ಕೈಕಟ್ಟಿ ಕಣ್ಣೀರು ಸುರಿಸುತ್ತ ಕುಳಿತ ಯಜಮಾನನನ್ನೂ ದೊರೆಯನ್ನೂ ನಂಬಿದವರೆಲ್ಲರ ವಿನಾಶ ಕಟ್ಟಿಟ್ಟ ಬುತ್ತಿ.
ಒಟ್ಟಿನಲ್ಲಿ ಗಣೇಶನ ವಾಹನದ ಕಾರಣದಿಂದ ಧರ್ಮಚಿಂತನೆಯ ಅವಕಾಶವೊಂದು ದೊರೆಯಿತು.