ಕೆಲವು ದಿನಗಳ ಹಿಂದೆ 'ತಮಿಳು ತಲೆಗಳ ನಡುವೆ' ಓದಿ ಮುಗಿಸಿದ್ದೆ. ಅದರ ಬಗ್ಗೆ ಈಗ ಬರೆಯಲು ಪುರಸತ್ತು ಸಿಕ್ಕಿದೆ.
ಪಾಠ ಮಾಡುವವರು ಎರಡು ಗುಣಗಳನ್ನು ಹೊಂದಿದ್ದರೆ ಚೆನ್ನ. ೧. ವಿಷಯವನ್ನು ಮನದಟ್ಟಾಗುವಂತೆ ತಿಳಿಸುವುದು ೨. ಪಾಠವು ಕಲ್ಲಿನ ಹೊರೆಯಂತಿರದೆ ವಿದ್ಯಾರ್ಥಿಗಳನ್ನು ರಂಜಿಸುವಂತೆ ಮಾಡುವುದು.
ಈ ರೀತಿ ಪಾಠ ಮಾಡುವವರು ಬಹಳ ಕಡಿಮೆ. ಡಾ. ಬಿ ಜಿ ಎಲ್ ಸ್ವಾಮಿಯವರು ಈ ಗುಂಪಿಗೆ ಸೇರುತ್ತಾರೆ. ವಿಷಯಪಾಂಡಿತ್ಯದ ಜೊತೆ ರಂಜನೀಯವಾಗಿ ಬರೆಯುವ ಕಲೆ ಕೂಡ ಇವರಿಗೆ ಸಿದ್ಧಿಸಿದೆ. ಇವರ ಹಸುರು ಹೊನ್ನು ಓದಿದಾಗ "ಅಬ್ಬಾ ನಮ್ಮ ಸಸ್ಯಶ್ರೀಯ ಅದ್ಭುತವೇ!" ಎಂದು ಅನ್ನಿಸಿತ್ತು. 'ತಮಿಳು ತಲೆಗಳ ನಡುವೆ' ಓದಿದಾಗ 'ಅಬ್ಬಾ ತಮಿಳರ ಭಂಡತನವೇ!" ಎಂದು ಅನ್ನಿಸಿತು. (ತಮಿಳರು ದಯವಿಟ್ಟು ಮನ್ನಿಸಬೇಕು. ಈ ಲೇಖನವನ್ನು ನೀವು ಓದುತ್ತಿರುವಿರಾದರೆ ಸ್ವಾಮಿಯವರು ನಿಮ್ಮಂತಹ ತಮಿಳರ ಬಗ್ಗೆ ತ.ತ.ನ ದಲ್ಲಿ ಬರೆದಿಲ್ಲವೆಂದು ಖಂಡಿತವಾಗಿ ಹೇಳಬಲ್ಲೆ).
ನಾನು ತಮಿಳುನಾಡಿನಲ್ಲಿ ಹೆಚ್ಚು ದಿನ ಇರಲಿಲ್ಲ. ಇದ್ದಿದ್ದೂ ಮಹಾನಗರವಾದ ಚೆನ್ನೈ ಯಲ್ಲಿ. ಚೂರುಪಾರು ತಮಿಳಿನ ಜೊತೆ ತೆಲುಗು ಚೆನ್ನಾಗಿ ಬಂದರೆ, ಬದುಕು ಸುಗಮವಾಗಿಯೇ ಇರುತ್ತದೆಯೆಂದು ಹೇಳಬೇಕು. ತಮಿಳುನಾಡಿನ ಬೇರೆಡೆಗಳಲ್ಲಿ ಕಾಣಿಸುವ ಭಾಷಾಂಧತೆ ಚೆನ್ನೈ ನಲ್ಲಿ ಕಡಿಮೆ ಎಂದು ಬೇರೆಯವರಿಂದ ಕೇಳಿ ತಿಳಿದಿದ್ದೇನೆ. ಆದರೂ ಭಾಷೆಯ ದೆಸೆಯಿಂದ ನಾನು ಸ್ವಲ್ಪ ಪಾಡುಗಳನ್ನು ಪಟ್ಟಿದ್ದೇನೆ. ಒಮ್ಮೆ ಪೂಜೆಗಾಗಿ ವೀಳೆಯದೆಲೆಯನ್ನು ಕೊಳ್ಳಲು ಹೋದೆ. ನನಗೆ ತಮಿಳಿನಲ್ಲಿ ಅದರ ಹೆಸರೇನೆಂದು ಗೊತ್ತಿರಲಿಲ್ಲ. ಆ ಅಂಗಡಿಯಾಕೆಯ ಹತ್ತಿರ ಸುಮಾರು ಸಾಮಾನುಗಳಿದ್ದವಾದ್ದರಿನ್ದ ಬೆರಳಿನಿಂದ ತೋರಿಸಿ "ಅದು ಕೊಡು" ಎಂದೆ. ಆಕೆಗೆ ಅರ್ಥ ಆಗಲಿಲ್ಲ. ತಿರುಗಿ ಕೇಳಿದ್ದಕ್ಕೆ "ತಮಿಳು ಕಲಿತು ಬಾ ಹೋಗು" ಎಂದು ಬೈದು ಕಳುಹಿಸಿದಳು. ವೀಳೆಯದೆಲೆ ಕೊಟ್ಟಳೋ ಇಲ್ಲವೋ ಮರೆತಿದೆ, ಆದರೆ ಬೈಸಿಕೊಂಡಿದ್ದು ನೆನಪಿದೆ.
ಮೇಲಿನ ರೀತಿಯ ಭಾಷಾಂಧತೆ ಸಾಮಾನ್ಯವಾದರೂ ಡಾ. ಸ್ವಾಮಿಯವರು ವರ್ಣಿಸಿರುವ ಭಾಷಾಂಧತೆ ಬೇರೆಯದೇ ರೀತಿಯದ್ದು. ತಮಿಳು ಸಾಹಿತ್ಯ-ಚರಿತ್ರೆ-ಸಂಸ್ಕೃತಿಯ ಬಹುತೇಕ ಸಂಶೋಧಕರು ತಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳನ್ನು ತಿಳಿಯಲು ಇಷ್ಟಪಡುವುದಿಲ್ಲ. ತಮಗೆ ಬೇಕಾದ ವಿಷಯಗಳೇ ಬೇರೆ ಭಾಷೆಗಳ ಜರ್ನಲ್ ಗಳಲ್ಲಿ ಬಂದಿದ್ದರೆ ಅವನ್ನು ಓದುವುದಿಲ್ಲ. ತಮ್ಮ ಥಿಯರಿಗಳ ಬಗ್ಗೆ ಇವರಿಗೆ ಇರುವ ನಂಬಿಕೆ ನೋಡಿದರೆ ಧೃತರಾಷ್ಟ್ರನಿಗೆ ದುರ್ಯೋಧನನ ಮೇಲಿದ್ದ ವ್ಯಾಮೋಹ ನೆನಪಿಗೆ ಬರುತ್ತದೆ. ಅವರ ವಾದಗಳಾದರೂ ಎಂಥವು? "ತಮಿಳು ಸ್ವತಂತ್ರವಾಗಿ ಬೇರೆ ಭಾಷೆಗಳ, ಅದೂ ಸಂಸ್ಕೃತಭಾಷೆಯ ಸಂಪರ್ಕವಿಲ್ಲದೆ ಹುಟ್ಟಿತು", "ತಮಿಳು ಎಲ್ಲ ಭಾಷೆಗಳಿಗಿಂತಲೂ, ಅದರಲ್ಲೂ ಸಂಸ್ಕೃತಭಾಷೆಗಿಂತ ಪ್ರಾಚೀನತರ", "ಕ್ರಿ.ಪೂ. ೧೦,೦೦೦ ರಲ್ಲಿ ತಮಿಳುಭಾಷೆಯ ಗ್ರಂಥಗಳು ಸಮುದ್ರದ ಪಾಲಾದವು, ಆದ್ದರಿಂದ ಅದರ ಹಳೆಯತನವನ್ನು ನಾವು ಪ್ರಶ್ನಿಸದೆ ನಂಬಬೇಕೇ ಹೊರತು, ಪುರಾವೆಗಳಿವೆಯೇ ಎಂದು ಕೇಳಬಾರದು", ಇವೇ ಮುಂತಾದ ರತ್ನಗಳು!
ಡಾ. ಸ್ವಾಮಿಯವರು ಹೇಳಿರುವಷ್ಟು ಭಾಷಾಂಧತೆ ತಮಿಳರಲ್ಲಿದೆಯೇ ಎಂಬ ಸಂಶಯ ಬರುವುದು ಸಹಜ. ನನ್ನದೇ ಅನುಭವ ಹೀಗಿದೆ. ನನಗೆ ಸಂಸ್ಕೃತದ ಬಗ್ಗೆ ಸ್ವಲ್ಪ ಹೆಚ್ಚಾದ ಅಭಿಮಾನವೇ ಇದೆ. ಅಮೆರಿಕದಲ್ಲಿದ್ದಾಗ ಸಂಸ್ಕೃತಭಾರತಿಯ ಕಾರ್ಯಕರ್ತ್ರಿಯಾಗಿದ್ದೆ. ಇದು ನನ್ನ ಜೊತೆ ಓದುತ್ತಿದ್ದ ಬೆಂಗಳೂರಿನ ತಮಿಳಳೊಬ್ಬಳಿಗೆ ಗೊತ್ತಿತ್ತು. ಮತಾಂತರ ಮಾಡಲು ಬರುವ ಮಿಷನರಿಯ ತೆರ ಒಂದು ದಿನ ಅವಳು ನನ್ನ ಹತ್ತಿರ ಬಂದು ತಮಿಳು ಅನೇಕ ಸಾವಿರ ವರ್ಷಗಳಷ್ಟು ಹಳೆಯದೆಂದೂ, ಎಂಥದೋ ಜಲಪ್ರಳಯದಲ್ಲಿ ಗ್ರಂಥಗಳು ಕಳೆದುಹೋದವೆಂದೂ, ಸಂಸ್ಕೃತಕ್ಕಿಂತ ತಮಿಳು ಹೆಚ್ಚು ಪ್ರಾಚೀನವೂ ಉತ್ತರವೂ (Comparative degree ಯಲ್ಲಿ 'ಉತ್ತಮ' ಕ್ಕಿಂತ 'ಉತ್ತರ' ಸೂಕ್ತವಾದುದು) ಆದದ್ದೆಂದೂ ನನಗೆ ಹೇಳಿದಳು. ಆ ಸಂಶೋಧನೆಯ ಜಾಲಪುಟಗಳನ್ನು ನನಗೆ ಕಳಿಸು, ನೋಡುತ್ತೇನೆ ಎಂದು ನನಗೆ ತೋಚಿದ ಬದಲು ಹೇಳಿದೆ. ಆಮೇಲೆ ನಾವಿಬ್ಬರೂ ಬೇರೆ ತರಗತಿಗಳಲ್ಲಿ ಇದ್ದಿದ್ದರಿಂದ ಅವಳ ಜೊತೆ ಮಾತನಾಡುವ ಸನ್ನಿವೇಶಗಳು ವಿರಳವಾಗಿ, ಈ ವಿಷಯ ಅಲ್ಲಿಗೇ ಮುಕ್ತಾಯವಾಯಿತು.
ಇಂಥ ಸಂಶೋಧನೆಗಳು ಬೇಸರವನ್ನೇಕೆ ಉಂಟುಮಾಡುತ್ತವೆ? ಬಾಯಿಗೆ ಬಂದ ರೀತಿಯಲ್ಲಿ, ಸಾಕ್ಷಿ-ಪುರಾವೆಗಳಿಲ್ಲದೆ ಥಿಯರಿಗಳನ್ನು ಸೃಷ್ಟಿಸಿದರೆ ಭಾಷೆಯ ಬೆಳವಣಿಗೆಗೆ ಕುಂದುಂಟಾಗುತ್ತದೆ. ಭಾಷೆಯ ಬಗ್ಗೆ ಅಭಿಮಾನ ತಪ್ಪಲ್ಲ, ಒಪ್ಪುವಂಥದ್ದೇ. ಆದರೆ ನಮ್ಮ ಇತಿಮಿತಿಗಳನ್ನು ನಾವು ಅರಿತಿರಬೇಕು. "ಪುರಾಣಮಿತ್ಯೇವ ನ ಸಾಧು ಸರ್ವಂ" ಎಂಬುದನ್ನು ತಿಳಿಯಬೇಕು. ದೇಶಾಭಿಮಾನಭಾಷಾಭಿಮಾನಗಳು ಅಗತ್ಯಕ್ಕಿಂತ ಹೆಚ್ಚಾದಾಗ "ನಮ್ಮ ಭಾಷೆಯು ಸ್ವತಂತ್ರವಾಗಿ ಹುಟ್ಟಿತು"... ಮುಂತಾದ ಧೋರಣೆಗಳು ಮನಸ್ಸಿನಲ್ಲಿ ಹುಟ್ಟುವುದೂ, ಈ ವಿಷಯಗಳಲ್ಲಿ ಸತ್ಯಾಸತ್ಯಗಳ ವಿವೇಚನೆಯಿಲ್ಲದೆ ಹೋಗುವುದೂ ಸಹಜವೇನೋ. ಪಾಪ ತಮಿಳರನ್ನು ಏಕೆ ಅನ್ನಬೇಕು, ನಮ್ಮ ಕೆಲವು ಆಧುನಿಕ ಸಂಸ್ಕೃತಜ್ಞರೂ, ಇತಿಹಾಸಜ್ಞರೂ ಮಾತನಾಡುವುದು ಇದೇ ಧಾಟಿಯಲ್ಲಿ. ಹುರುಳಿಲ್ಲದ ಬಾಲಿಶವಾದಗಳನ್ನು ಮಂಡಿಸಿ ಈ ವಿಷಯಗಳ ಬಗ್ಗೆಯೇ ಇತರರಿಗೆ ಅಸಡ್ಡೆ ಬರುವಂತೆ ಮಾಡುತ್ತಾರೆ. ಹೀಗಾದಾಗ, ಆ ಭಾಷೆ-ಸಂಸ್ಕೃತಿಗಳ ಬಗ್ಗೆ ನಿಜವಾದ ಕಳಕಳಿ ಮತ್ತು ಅಭಿಮಾನವಿರುವವರಿಗೆ ತಲೆ ಚಚ್ಚಿಕೊಳ್ಳೋಣವೆಂದು ಅನ್ನಿಸುತ್ತದೆ.
ಸಾಹಿತ್ಯದಲ್ಲಿ ಈ ರೀತಿಯಾದರೆ ಸಂಗೀತದಲ್ಲಿ ಇನ್ನೊಂದು ರೀತಿಯ ತಮಾಷೆ. ಸಂಗೀತದ ತ್ರಿಮೂರ್ತಿಗಳು ತಮಿಳುನಾಡಿನಲ್ಲಿಯೇ ಹುಟ್ಟಿ ಬೆಳೆದದ್ದು. ಆದರೆ ಅವರ ಬಹುತೇಕ ರಚನೆಗಳು ತೆಲುಗಿನಲ್ಲಿ ಮತ್ತು ಸಂಸ್ಕೃತದಲ್ಲಿ ಇವೆ. ತಮಿಳಿನಲ್ಲಿ ಅಕ್ಷರಗಳು ಕಡಿಮೆ ಇರುವುದರಿಂದ ಮಿಕ್ಕ ಭಾರತೀಯ ಭಾಷೆಗಳನ್ನು ಅದರಲ್ಲಿ ಬರೆಯುವುದೂ, ಬರೆದದ್ದನ್ನು ಅರ್ಥಮಾಡಿಕೊಳ್ಳುವುದೂ ದೊಡ್ಡ ಪ್ರಯಾಸ. ಈಗ ಉದಾಹರಣೆಗೆ, ಭಾರತಿಯರ್ ಎಂದು ತಮಿಳಿನಲ್ಲಿ ಬರೆಯಲು பாரதியர் ಎಂದು ಬರೆದರೆ ಅದು ಪಾರದಿಯರ್ ಆಗಬಹುದು ಅಥವಾ ಪಾರತಿಯರ್ ಕೂಡ ಆಗಬಹುದು. ಆದ್ದರಿಂದ, ತಿಳಿಯದ ಬೇರೆ ಭಾಷೆಗಳನ್ನು ಓದಬೇಕಾದರೆ ಊಹೆಯನ್ನೇ ಅವಲಂಬಿಸಬೇಕು. (ಗ್ರಂಥ ಎಂಬೊಂದು ಲಿಪಿ ಇದ್ದಿದ್ದು, ರಾಜಕೀಯಕಾರಣಗಳಿಂದಾಗಿ ಅದನ್ನು ಉಪಯೋಗಿಸದೆ ಇರುವುದು ಬೇರೆ ವಿಚಾರ.) ಹಾಗಾಗಿ ಸಂಸ್ಕೃತ-ತೆಲುಗು-ಕನ್ನಡದ ಕೃತಿಗಳು ತಮಿಳು ಸಂಗೀತಗಾರರ ಬಾಯಲ್ಲಿ ವಿಚಿತ್ರರೂಪಗಳನ್ನು ಪಡೆಯುತ್ತವೆ. 'ನಾರದ-ಬಯಗರ' ಎಂದು ವಿಷ್ಣುವನ್ನು ವರ್ಣಿಸಿದ್ದನ್ನು ('ಸಾರಸಾಕ್ಷ ಪರಿಪಾಲಯ ಮಾಂ' ಎಂಬ ಪಂತುವರಾಳಿಯ ಕೃತಿ) ಕೇಳಿ "ವಿಷ್ಣು ನಾರದನಿಗೆ ಯಾವಾಗ ಭಯ ಹುಟ್ಟಿಸಿದ?" ಎಂದು ಚಿಂತಿಸುತ್ತಿದ್ದಾಗ ಹೊಳೆದದ್ದು - ಅದು ನಾರದ-ಭಯಹರ ಎಂದು! ಶುದ್ಧ ತಮಿಳಿನಲ್ಲಿ ಹಕಾರವಿಲ್ಲ. ಈಗೀಗ ಹಕಾರದ ಸೇರ್ಪಡೆಯಾಗಿದೆ. ಆದರೂ ಮಾತನಾಡುವಾಗ ಮಹೇಶ ಮಗೇಸನಾಗುತ್ತಾನೆ. ಇದು ತಮಿಳಿನ ವಿಶೇಷತೆ ಎಂದು ಕರೆಯಬಹುದೇನೋ. ಆದರೆ ಸಂಗೀತವನ್ನು ನೂರಾರು-ಸಾವಿರಾರು ಜನರ ಮುಂದೆ ಹಾಡುವ ಕಲಾವಿದರ ಉಚ್ಚಾರಣೆ ಸರಿಯಾಗಿದ್ದರೆ ಚೆನ್ನ. ಒಂದು ಒಳ್ಳೆಯ ವಿಷಯವೆಂದರೆ ಯುವ-ಸಂಗೀತಗಾರರ ಸಂಗೀತದಲ್ಲಿ ಉಚ್ಚಾರಣಾ-ದೋಷ ಕೇಳಿಬರುತ್ತಿಲ್ಲವೆಂದು ಕೇಳಿದ್ದೇನೆ.
ಕೇವಲ ಒಂದು ಹಾಸ್ಯಭರಿತವಾದ ಪುಸ್ತಕವನ್ನು ಓದಬೇಕೆಂದು ತ.ತ.ನ ವನ್ನು ಕೈಗೆತ್ತಿಕೊಂಡರೂ ನಿರಾಸೆಯಾಗದಷ್ಟು ಚೆನ್ನಾಗಿ ಡಾ.ಸ್ವಾಮಿಯವರು ಹಾಸ್ಯದ ಮಧ್ಯೆಯೇ ವಿಚಾರಗಳನ್ನು ಹೆಣೆದಿದ್ದಾರೆ. ಪುರಂದರದಾಸರ (ಬುರಂತರ ತಾಶರ) ಆರಾಧನೆಯ ಬಗೆಗಿನ ಅಧ್ಯಾಯ ಓದುತ್ತಿದ್ದರಂತೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಅವರ ಹಸುರು ಹೊನ್ನಿನಲ್ಲೂ ಇದೇ ರೀತಿಯ ಹಾಸ್ಯ ತುಂಬಿದೆ. ಈ ಹಾಸ್ಯ ಸಹಜವಾಗಿದ್ದು, ಘಟನೆಗಳು ನಿಜವಾಗಿ ನಡೆದವೇ ಇರಬೇಕು (ಹಸುರು ಹೊನ್ನಿನಲ್ಲಿ ಬರುವ ಕತ್ತೆಗಳ ವಿಷಯ ಕೂಡ ನಿಜವಾಗಿ ನಡೆದಿದ್ದೇ?... ತಿಳಿದವರು ಹೇಳಿದರೆ ಒಳ್ಳೆಯದು).
ಡಾ.ಸ್ವಾಮಿಯವರ ಇತರ ಪುಸ್ತಕಗಳಾದ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಮತ್ತು "ಕಾಲೇಜು ರಂಗ" ಮನೆಯಲ್ಲಿವೆ. ಅವನ್ನೂ ಓದಲೇಬೇಕು ಎಂಬಷ್ಟು ಡಾ.ಸ್ವಾಮಿಯವರ ಬರೆಹ ಇಷ್ಟವಾಗಿದೆ. ಅದಕ್ಕೆ ಸಮಯ ಯಾವಾಗ ಸಿಗುತ್ತದೆಯೋ ತಿಳಿಯದು.
2 comments:
Super ada laghu shiliyalli vishaya mandane madiruviri.
"ಒಂದು ಒಳ್ಳೆಯ ವಿಷಯವೆಂದರೆ ಯುವ-ಸಂಗೀತಗಾರರ ಸಂಗೀತದಲ್ಲಿ ಉಚ್ಚಾರಣಾ-ದೋಷ ಕೇಳಿಬರುತ್ತಿಲ್ಲವೆಂದು ಕೇಳಿದ್ದೇನೆ."
ತಮಿಳರ ಉಚ್ಚಾರ ಯಾಕೆ ಹಾಗೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದೆ. ಇದಕ್ಕೆ ಅವರ ಅರೆಬೆಂದ ಲಿಪಿ ಕಾರಣ ಎಂದು ನಿಮ್ಮ ಬರಹದಿಂದ ಗೊತ್ತಾಯಿತು.
ಓ.ಎಸ. ಅರುಣ್ ಅವರು ಕನ್ನಡ ಭಜನೆಗಳನ್ನು ಹಾಡಿದ್ದರಲ್ಲಿ ಉಚ್ಚಾರ ಗಮನಿಸಿ.
http://www.youtube.com/watch?v=EXtnHX71WtA
1) ಗೆಜ್ಜೆಯ ಗಾಲು ಗಿಲು ಗಿಲು ಎನುತ
( ಕಾಲು ಆಗಬೇಕಾಗಿತ್ತು )
2) ಭಾಗ್ಯವೇ ಕೊಟ್ಟು
(ಭಾಗ್ಯವ ಆಗಬೇಕಿತ್ತು)
3) ಕಾಲಿವೆ ಹರಿಸಿ
(ಕಾಲುವೆ ಆಗಬೇಕಿತ್ತು)
Post a Comment