Wednesday, November 21, 2007

ಕಾಳಿದಾಸ - ೧

(ಈ ಲೇಖನ ನೆನ್ನೆ ಬರೆದದ್ದು)

ಇಂದು ಉತ್ಥಾನದ್ವಾದಶೀ. ದೀಪಾವಳಿಯಲ್ಲಿ ಉಳಿದ ಪಟಾಕಿಗಳನ್ನು ಸುಟ್ಟು ಸಂಭ್ರಮಪಡುವ 'ಕಿರುದೀಪಾವಳಿ'. ಕೃಷ್ಣ-ತುಳಸಿಯರ ವಿವಾಹವನ್ನು ಸಂಭ್ರಮದಿಂದ ಆಚರಿಸುವ ದಿನ. ಸಂಪ್ರದಾಯರೀತ್ಯಾ ಇದೇ ದಿನ ಅನಾಮಿಕೆಯನ್ನು ಸಾರ್ಥಕಗೊಳಿಸಿದ* ಕವಿಕುಲಗುರು ಕಾಳಿದಾಸನ ಜನ್ಮದಿನ.

ಕಾಳಿದಾಸನ ದೇಶ-ಕಾಲಗಳ ಕುರಿತು ನಮಗೆ ಹೆಚ್ಚು ಗೊತ್ತಿಲ್ಲ. ಅವನು ಕುರುಬನಾಗಿದ್ದು, ನಂತರ ಕಾಳಿಯ ಪ್ರಸಾದದಿಂದ ವರಕವಿಯಾಗಿ ಭೋಜರಾಜನ ಆಸ್ಥಾನದಲ್ಲಿದ್ದ ಎಂಬುದು ಪ್ರಸಿದ್ಧವಾದ (ದಂತ?)ಕಥೆ. ಇದಾವುದೂ ಐತಿಹಾಸಿಕವಾಗಿ ಸಿದ್ಧವಾಗಿಲ್ಲ. ಸ್ವತಃ ಕಾಳಿದಾಸನ ಕೃತಿಗಳಿಂದ ಅವನಿಗೆ ಉಜ್ಜಯಿನೀನಗರ ಅತಿಪ್ರಿಯವಾಗಿತ್ತು** ಎಂಬುದನ್ನು ಆಧಾರವಾಗಿಟ್ಟುಕೊಂಡು ಅದೇ ಅವನ ವಾಸಸ್ಥಾನವಾಗಿತ್ತು ಎಂದು ತೀರ್ಮಾನಿಸಬಹುದು, ಅಷ್ಟೇ.

ಕಾಳಿದಾಸನ ಧರ್ಮಪ್ರಜ್ಞೆ ಅನ್ಯಾದೃಶವಾದದ್ದು. ಶೃಂಗಾರಕವಿಯೆಂದೇ ಕೆಲವೊಮ್ಮೆ ಪ್ರಸಿದ್ಧನಾದರೂ ಶೃಂಗಾರಕ್ಕಿಂತ ಹೆಚ್ಚಾಗಿ ನಮಗೆ ಅವನ ಕಾವ್ಯಗಳಲ್ಲಿ ಕಾಣುವುದು ಒಂದು ಉತ್ತಮವಾದ, ಪಾಲನೆಗೆ ಯೋಗ್ಯವಾದ ಜೀವನಾದರ್ಶ ಹಾಗೂ ಗಂಭೀರವಾದ, ಉದಾರವಾದ ಅಂತರ್ದೃಷ್ಟಿ. ಶೃಂಗಾರ ಹೇರಳವಾಗಿ ಇರುವುದಾದರೂ ಆ ಶೃಂಗಾರವೂ ಧರ್ಮಪ್ರಜ್ಞೆ ಮತ್ತು ಉದಾರತೆಗಳಿಗೆ ಪೂರಕವಾಗಿಯೇ ಇದೆ. ದುಷ್ಯಂತ-ಶಕುಂತಲೆಯರ ಪ್ರಣಯವಾಗಲಿ, ಔಶೀನರಿಯ ತ್ಯಾಗವಿರಲಿ, ಕಣ್ವರಿಗೆ ಶಕುಂತಲೆಯನ್ನು ಕಳುಹಿಸುವಾಗ ಉಂಟಾಗುವ ದುಃಖವಾಗಲಿ, ದಿಲೀಪನ ತಪಸ್ಸಾಗಲಿ ಕೌತ್ಸನ ಪ್ರಸಂಗವಾಗಲಿ, ಎಲ್ಲೆಡೆಗಳಲ್ಲಿ ಮಾನವೀಯತೆ-ಉದಾರತೆಗಳೇ ಕಾಣಿಸುತ್ತವೆ. ಒಟ್ಟಿನಲ್ಲಿ ಹೇಳಬೇಕಾದರೆ, ರಘುವಂಶ-ಶಾಕುಂತಲಾದಿ ಕೃತಿಗಳು ಸುಖದಲ್ಲಿ ಮುದವನ್ನು ನೀಡಿ, ಕಷ್ಟದಲ್ಲಿ ದೃಢತೆಯ ನೆಲೆಯಾಗಿ ನಿಲ್ಲುವ ದಾರಿದೀಪಗಳು.

'ಉಪಮಾ ಕಾಲಿದಾಸಸ್ಯ' ಎಂಬ ಶ್ಲೋಕಪಾದ ಸರ್ವವಿದಿತ. ಆದರೆ ಅದೇ ಶ್ಲೋಕದ*** ಇನ್ನೆರಡು ಗುಣಗಳೂ (ಅರ್ಥಗೌರವ, ಪದಲಾಲಿತ್ಯ) ಸರ್ವಥಾ ಕಾಳಿದಾಸನಿಗೂ ಸಲ್ಲುತ್ತವೆ ಎಂದು ನನ್ನ ಭಾವನೆ. ಕಾಲಿದಾಸನ ಉಪಮೆಗಳಂತೂ ಮನೋಹರವಾಗಿ, ಕೇಳಿದೊಡನೆಯೇ "ಆಹಾ" ಎಂದು ಅನ್ನಿಸುವಂತೆ ಮಾಡುವವು.

ಮುಂಬರುವ ಕೆಲವು ಕಂತುಗಳಲ್ಲಿ, ಕಾಳಿದಾಸನ ಕೃತಿಗಳಲ್ಲಿ (ಮುಖ್ಯವಾಗಿ ಶಾಕುಂತಲ ಮತ್ತು ರಘುವಂಶ) ನನಗೆ ಕಂಡ ಸ್ವಾರಸ್ಯಕರ ವಿಷಯಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ.*ಪುರಾ ಕವೀನಾಂ ಗಣನಾಪ್ರಸಂಗೇ ಕನಿಷ್ಠಿಕಾಧಿಷ್ಠಿತಕಾಲಿದಾಸಾ |
ಅದ್ಯಾಪಿ ತತ್ತುಲ್ಯಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ ||
- ಹಿಂದೆ ಕವಿಗಳ ಎಣಿಕೆ ನಡೆಯುತ್ತಿದ್ದಾಗ ಕಿರುಬೆರಳಿನಲ್ಲಿ (ಅಂದರೆ ಮೊದಲು) ನಿಂತದ್ದು ಕಾಳಿದಾಸ. ಈಗಲೂ ಅವನಿಗೆ ಸದೃಶನಾದ ಕವಿಯ ಅಭಾವದ ಕಾರಣದಿಂದ (ಉಂಗುರದ ಬೆರಳಿಗೆ) 'ಅನಾಮಿಕಾ' ಎಂಬ ಹೆಸರು ಅನ್ವರ್ಥವಾಯಿತು!

** ಸ್ವಲ್ಪೀಭೂತೇ ಸುಚರಿತಫಲೇ ಸ್ವರ್ಗಿಣಾಂ ಗಾಂ ಗತಾನಾಂ
ಶೇಷೈ: ಪುಣ್ಯೈರ್ಹೃತಮಿವ ದಿವಃ ಕಾಂತಿಮತ್ಖಂಡಮೇಕಮ್|
ಮೇಘದೂತದಲ್ಲಿ ಬರುವ ಒಂದು ಶ್ಲೋಕಾರ್ಧ.'ಸ್ವರ್ಗದಲ್ಲಿದ್ದು, ಪುಣ್ಯ ಕಡಿಮೆಯಾಗುತ್ತಿದ್ದಂತೆ ಭೂಮಿಗೆ ಬರುವವರು ತಮ್ಮ ಉಳಿದ ಪುಣ್ಯದಿಂದ ಸ್ವರ್ಗದ ಒಂದು ಸುಂದರವಾದ ಭಾಗವನ್ನು ಇಳೆಗೆ ತಂದಂತಿದೆ!' ಎಂದು ಕಾಳಿದಾಸ ಉಜ್ಜಯಿನಿಯನ್ನು ವರ್ಣಿಸುತ್ತಾನೆ. ಅವನಿಗೆ ಉಜ್ಜಯಿನಿಯ ಮೇಲೆ ಅಷ್ಟು ಪ್ರೀತಿ!

*** ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಮ್ |
ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋ ಗುಣಾಃ ||

11 comments:

suptadeepti said...
This comment has been removed by the author.
suptadeepti said...

Wonderful... ಈಗ ಈ ಪುಟಗಳಲ್ಲಿ ಹೊಸ ಚೇತನ ಸಂಚಾರವಾಗಿದೆ. ಊಡಿಸು, ಉಣ್ಣುತ್ತೇವೆ.

ನೀಲಾಂಜನ said...

ಪಾರಿಜಾತ ಅವರೆ,

ಈ ಸರಣಿಯ ಮುಂದಿನ ಲೇಖನಗಳಿಗೆ ನಾನು ಎದುರು ನೋಡುವೆ.

ಒಂದು ಪ್ರಶ್ನೆ. ತುಳಸೀಹಬ್ಬದ ದಿನ ಕಾಳಿದಾಸ ಹುಟ್ಟಿದ್ದು ಎಂದು ಎಲ್ಲಿ ಬಂದಿದೆ ಎಂದು ತಿಳಿಸಿ.

ಅಲ್ಲದೆ, ಭೋಜರಾಜನ ಆಸ್ಥಾನದಲ್ಲಿ ಕಾಳಿದಾಸ ಇದ್ದದ್ದು ಎನ್ನುವ ದಂತಕಥೆಯನ್ನು ನಾವು ಅಷ್ಟಾಗಿ ಎಣಿಸುವಂತಿಲ್ಲ ಎಂದು ನನ್ನ ಭಾವನೆ (ಐಹೊಳೆಯ ಶಾಸನ ಭೋಜನಿಗಿಂತ ೪೦೦ ವರ್ಷ ಮೊದಲೇ ಬಂದಿದೆಯಲ್ಲ!)

ನೀವು ಇದನ್ನು ಓದಿರದಿದ್ದರೆ, ಈ ಕೊಂಡಿ ನೋಡಿ - ನಿಮಗೆ ಆಸಕ್ತಿ ಇರಬಹುದು:

ಅಸ್ತಿ ಕಶ್ಚಿದ್ವಾಗ್ವಿಶೇಷ:? :

http://www.sampada.net/blog/hamsanandi?page=6

-ನೀಲಾಂಜನ

ನೀಲಾಂಜನ said...

ಕ್ಷಮಿಸಿ, ಸರಿಯಾದ ಕೊಂಡಿ ಇಲ್ಲಿದೆ:

ಅಸ್ತಿ ಕಶ್ಚಿತ್ ವಾಗ್ವಿಶೇಷ:? :

http://www.sampada.net/blog/hamsanandi/25/05/2007/4149


-ನೀಲಾಂಜನ

parijata said...

@ಸುಪ್ತದೀಪ್ತಿ,
ಮೆಚ್ಚುಗೆಗೆ ಧನ್ಯವಾದಗಳು. ನನ್ನ ಕೈಲಾದಷ್ಟು ಬರೆಯಲು ಪ್ರಯತ್ನಿಸುತ್ತೇನೆ.

@ನೀಲಾಂಜನ,
ಕಾಳಿದಾಸನ ಜನ್ಮದಿನದ ಪ್ರಶ್ನೆಯನ್ನು ಗುರುಗಳಾದ ಶತಾವಧಾನಿ ರಾ.ಗಣೇಶರವರ ಮುಂದಿಟ್ಟಾಗ ಅವರು ಹೇಳಿದ್ದಿಷ್ಟು -

ಕಾಳಿದಾಸನ ದೇಶಕಾಲಗಳೇ ವಿವಾದಾಸ್ಪದವಾಗಿರುವಾಗ ಅವನ ಜನ್ಮದಿನ ಇಂಥದೇ ಎಂದು ಹೇಳಲು ಅಸಾಧ್ಯ. ಆದರೆ ಅವನು ತನ್ನ ಕೃತಿಗಳಲ್ಲಿ ಎರಡೇ ತಿಥಿಗಳನ್ನು ಹೆಸರಿಸಿರುವುದು. ಒಂದು ಪರಿಚಿತವಾದ 'ಆಷಾಢಸ್ಯ ಪ್ರಥಮದಿವಸೇ...', ಮತ್ತೊಂದು ಮೇಘದೂತದಲ್ಲಿಯೇ ಬರುವ 'ಶಾಪಾಂತೋ ಮೇ ಭುಜಗಶಯನಾದುತ್ಥಿತೇ ಶಾರ್ಙ್ಗಪಾಣೌ' - ಅಂದರೆ ಭುಜಗಾಸನದಿಂದ ನಾರಾಯಣನು ಎದ್ದಾಗ ಎಂದು - ಇದೇ ಉತ್ಥಾನದ್ವಾದಶೀ. ವಿದ್ವಜ್ಜನರು ಆಷಾಢಕ್ಕಿಂತ ಉತ್ಥಾನದ್ವಾದಶಿಯೇ 'ಜಯಂತಿ'ಯಾಗಲು ಸೂಕ್ತ ಎಂದು ನಿರ್ಧರಿಸಿದರು. ಕಾಲಿದಾಸ ಅಕಾಡೆಮಿಯವರು ಇದೇ ದಿನ ಕಾಳಿದಾಸಜಯಂತಿಯನ್ನು ಆಚರಿಸುತ್ತಾರೆ. ಅಷ್ಟೇಕೆ, ಪಂಚಾಂಗಗಳಲ್ಲಿ ಕೂಡ ಕಾಳಿದಾಸಜಯಂತಿಯನ್ನು ಹೆಸರಿಸುತ್ತಾರೆ. ಹಾಗಾಗಿ 'ಸಂಪ್ರದಾಯರೀತ್ಯಾ' ಎಂದು ಹೇಳಿದ್ದು. ಕೆಲವೇ ವರ್ಷಗಳ ಹಿಂದೆ ಹುಟ್ಟುಹಾಕಿದ ಸಂಪ್ರದಾಯ!

ಒಂದು ಸಮರ್ಥನೆ ಏನೆಂದರೆ ಅನೇಕಮಹಾಪುರುಷರ ಜನ್ಮದಿನಗಳು (ಶಂಕರಜಯಂತಿ, ಇತ್ಯಾದಿ) ಹೀಗೆಯೇ ನಮ್ಮಿಂದ ಅಂದುಕೊಳ್ಳಲ್ಪಟ್ಟವು. ಕೆಲವು ಗ್ರಂಥೋಕ್ತಗಳಾದರೂ ವಿವಾದಾಸ್ಪದವಾದವು. ಇದೂ ಹಾಗೆಯೇ ಎಂದುಕೊಂಡರೆ ಪರವಾಗಿಲ್ಲ.

ಇನ್ನು ಕಾಳಿದಾಸ ಭೋಜರಾಜನ ಆಸ್ಥಾನದಲ್ಲಿದ್ದುದು ದಂತಕಥೆಯೇ ಸರಿ!

ಸಂಪದದ ಲೇಖನವನ್ನು ಕಳಿಸಿದ್ದಕ್ಕೆ ಧನ್ಯವಾದಗಳು.

ತುರಂಗ said...

'ಆಶಾಢಸ್ಯ ಪ್ರಶಮದಿವಸೇ' ಎನ್ನುವ ಪಾಠಾಂತರ ಕೂಡ ಇದೆ (ಫ್ರಾಂಕ್ಲಿನ್ ಮತ್ತು ಇಲಿನಾರ್ ಎಡ್ಗರ್ಟನ್ ಅವರು ಅವರ ಇಂಗ್ಲೀಷ್ ಭಾಷಾಂತರದಲ್ಲಿ ಈ ಪಾಠವನ್ನೇ ಬಳಸಿಕೊಂಡಿದ್ದಾರೆ). ಈ ಪಾಠ ಸಾಂಪ್ರದಾಯಿಕವಾಗಿ ಬೇಸಗೆ ಮುಗಿದು ಮಳೆಗಾಲದ ಆರಂಭವನ್ನು ಸೂಚಿಸುವುದರಿಂದ, ಕಾವ್ಯದ ವಾತಾವರಣಕ್ಕೆ ಇನ್ನೂ ಹೆಚ್ಚು ಪೂರಕವಾಗಿದೆ ಎಂದು ಕಾಣುತ್ತದೆ.

DAM said...

Good one.Keep continue to write on our kavis

ತುರಂಗ said...

ಪಾಠಾಂತರ ಇರುವುದು ’ಆಷಾಢಸ್ಯ ಪ್ರಶಮದಿವಸೇ’..., ಕೈ ತಪ್ಪಿ ’ಕೋಲ್ಶ’ಪ್ರಯೋಗವಾಯಿತು! ಕ್ಷಮಿಸಿ!

Anonymous said...

ಪಾರಿಜಾತ ಅವರೆ,

ವಿವರಣೆಗೆ ಧನ್ಯವಾದಗಳು.ಶಂಕರ ಜಯಂತಿಯೂ ಹೀಗೆ, ಅಂದುಕೊಳ್ಳಲ್ಪಟ್ಟದು ಎಂಬುದು ನನಗೆ ತಿಳಿದಿರಲಿಲ್ಲ!

-ನೀಲಾಂಜನ

parijata said...

ತುರಂಗ ಅವರೆ,
'ಪ್ರಶಮದಿವಸೇ' ಎಂಬ ಪಾಠಾಂತರದ ಬಗ್ಗೆ ನನಗೆ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.

ದೀಪಕ್ ಅವರೆ,
ಧನ್ಯವಾದಗಳು.

ನೀಲಾಂಜನ ಅವರೆ,
ಉತ್ತರಕ್ಕಾಗಿ ಧನ್ಯವಾದಗಳು. ಗಣೇಶರು ಹೇಳುವ ತನಕ ಶಂಕರಜಯಂತಿಯೂ ಹೀಗೆಯೇ ಎಂದು ನನಗೂ ತಿಳಿದಿರಲಿಲ್ಲ.

parijata said...

@Aram,
Thanks for the insightful words. Have deleted the comment, as you asked...