Wednesday, November 21, 2007

ಕಾಳಿದಾಸ - ೧

(ಈ ಲೇಖನ ನೆನ್ನೆ ಬರೆದದ್ದು)

ಇಂದು ಉತ್ಥಾನದ್ವಾದಶೀ. ದೀಪಾವಳಿಯಲ್ಲಿ ಉಳಿದ ಪಟಾಕಿಗಳನ್ನು ಸುಟ್ಟು ಸಂಭ್ರಮಪಡುವ 'ಕಿರುದೀಪಾವಳಿ'. ಕೃಷ್ಣ-ತುಳಸಿಯರ ವಿವಾಹವನ್ನು ಸಂಭ್ರಮದಿಂದ ಆಚರಿಸುವ ದಿನ. ಸಂಪ್ರದಾಯರೀತ್ಯಾ ಇದೇ ದಿನ ಅನಾಮಿಕೆಯನ್ನು ಸಾರ್ಥಕಗೊಳಿಸಿದ* ಕವಿಕುಲಗುರು ಕಾಳಿದಾಸನ ಜನ್ಮದಿನ.

ಕಾಳಿದಾಸನ ದೇಶ-ಕಾಲಗಳ ಕುರಿತು ನಮಗೆ ಹೆಚ್ಚು ಗೊತ್ತಿಲ್ಲ. ಅವನು ಕುರುಬನಾಗಿದ್ದು, ನಂತರ ಕಾಳಿಯ ಪ್ರಸಾದದಿಂದ ವರಕವಿಯಾಗಿ ಭೋಜರಾಜನ ಆಸ್ಥಾನದಲ್ಲಿದ್ದ ಎಂಬುದು ಪ್ರಸಿದ್ಧವಾದ (ದಂತ?)ಕಥೆ. ಇದಾವುದೂ ಐತಿಹಾಸಿಕವಾಗಿ ಸಿದ್ಧವಾಗಿಲ್ಲ. ಸ್ವತಃ ಕಾಳಿದಾಸನ ಕೃತಿಗಳಿಂದ ಅವನಿಗೆ ಉಜ್ಜಯಿನೀನಗರ ಅತಿಪ್ರಿಯವಾಗಿತ್ತು** ಎಂಬುದನ್ನು ಆಧಾರವಾಗಿಟ್ಟುಕೊಂಡು ಅದೇ ಅವನ ವಾಸಸ್ಥಾನವಾಗಿತ್ತು ಎಂದು ತೀರ್ಮಾನಿಸಬಹುದು, ಅಷ್ಟೇ.

ಕಾಳಿದಾಸನ ಧರ್ಮಪ್ರಜ್ಞೆ ಅನ್ಯಾದೃಶವಾದದ್ದು. ಶೃಂಗಾರಕವಿಯೆಂದೇ ಕೆಲವೊಮ್ಮೆ ಪ್ರಸಿದ್ಧನಾದರೂ ಶೃಂಗಾರಕ್ಕಿಂತ ಹೆಚ್ಚಾಗಿ ನಮಗೆ ಅವನ ಕಾವ್ಯಗಳಲ್ಲಿ ಕಾಣುವುದು ಒಂದು ಉತ್ತಮವಾದ, ಪಾಲನೆಗೆ ಯೋಗ್ಯವಾದ ಜೀವನಾದರ್ಶ ಹಾಗೂ ಗಂಭೀರವಾದ, ಉದಾರವಾದ ಅಂತರ್ದೃಷ್ಟಿ. ಶೃಂಗಾರ ಹೇರಳವಾಗಿ ಇರುವುದಾದರೂ ಆ ಶೃಂಗಾರವೂ ಧರ್ಮಪ್ರಜ್ಞೆ ಮತ್ತು ಉದಾರತೆಗಳಿಗೆ ಪೂರಕವಾಗಿಯೇ ಇದೆ. ದುಷ್ಯಂತ-ಶಕುಂತಲೆಯರ ಪ್ರಣಯವಾಗಲಿ, ಔಶೀನರಿಯ ತ್ಯಾಗವಿರಲಿ, ಕಣ್ವರಿಗೆ ಶಕುಂತಲೆಯನ್ನು ಕಳುಹಿಸುವಾಗ ಉಂಟಾಗುವ ದುಃಖವಾಗಲಿ, ದಿಲೀಪನ ತಪಸ್ಸಾಗಲಿ ಕೌತ್ಸನ ಪ್ರಸಂಗವಾಗಲಿ, ಎಲ್ಲೆಡೆಗಳಲ್ಲಿ ಮಾನವೀಯತೆ-ಉದಾರತೆಗಳೇ ಕಾಣಿಸುತ್ತವೆ. ಒಟ್ಟಿನಲ್ಲಿ ಹೇಳಬೇಕಾದರೆ, ರಘುವಂಶ-ಶಾಕುಂತಲಾದಿ ಕೃತಿಗಳು ಸುಖದಲ್ಲಿ ಮುದವನ್ನು ನೀಡಿ, ಕಷ್ಟದಲ್ಲಿ ದೃಢತೆಯ ನೆಲೆಯಾಗಿ ನಿಲ್ಲುವ ದಾರಿದೀಪಗಳು.

'ಉಪಮಾ ಕಾಲಿದಾಸಸ್ಯ' ಎಂಬ ಶ್ಲೋಕಪಾದ ಸರ್ವವಿದಿತ. ಆದರೆ ಅದೇ ಶ್ಲೋಕದ*** ಇನ್ನೆರಡು ಗುಣಗಳೂ (ಅರ್ಥಗೌರವ, ಪದಲಾಲಿತ್ಯ) ಸರ್ವಥಾ ಕಾಳಿದಾಸನಿಗೂ ಸಲ್ಲುತ್ತವೆ ಎಂದು ನನ್ನ ಭಾವನೆ. ಕಾಲಿದಾಸನ ಉಪಮೆಗಳಂತೂ ಮನೋಹರವಾಗಿ, ಕೇಳಿದೊಡನೆಯೇ "ಆಹಾ" ಎಂದು ಅನ್ನಿಸುವಂತೆ ಮಾಡುವವು.

ಮುಂಬರುವ ಕೆಲವು ಕಂತುಗಳಲ್ಲಿ, ಕಾಳಿದಾಸನ ಕೃತಿಗಳಲ್ಲಿ (ಮುಖ್ಯವಾಗಿ ಶಾಕುಂತಲ ಮತ್ತು ರಘುವಂಶ) ನನಗೆ ಕಂಡ ಸ್ವಾರಸ್ಯಕರ ವಿಷಯಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ.*ಪುರಾ ಕವೀನಾಂ ಗಣನಾಪ್ರಸಂಗೇ ಕನಿಷ್ಠಿಕಾಧಿಷ್ಠಿತಕಾಲಿದಾಸಾ |
ಅದ್ಯಾಪಿ ತತ್ತುಲ್ಯಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ ||
- ಹಿಂದೆ ಕವಿಗಳ ಎಣಿಕೆ ನಡೆಯುತ್ತಿದ್ದಾಗ ಕಿರುಬೆರಳಿನಲ್ಲಿ (ಅಂದರೆ ಮೊದಲು) ನಿಂತದ್ದು ಕಾಳಿದಾಸ. ಈಗಲೂ ಅವನಿಗೆ ಸದೃಶನಾದ ಕವಿಯ ಅಭಾವದ ಕಾರಣದಿಂದ (ಉಂಗುರದ ಬೆರಳಿಗೆ) 'ಅನಾಮಿಕಾ' ಎಂಬ ಹೆಸರು ಅನ್ವರ್ಥವಾಯಿತು!

** ಸ್ವಲ್ಪೀಭೂತೇ ಸುಚರಿತಫಲೇ ಸ್ವರ್ಗಿಣಾಂ ಗಾಂ ಗತಾನಾಂ
ಶೇಷೈ: ಪುಣ್ಯೈರ್ಹೃತಮಿವ ದಿವಃ ಕಾಂತಿಮತ್ಖಂಡಮೇಕಮ್|
ಮೇಘದೂತದಲ್ಲಿ ಬರುವ ಒಂದು ಶ್ಲೋಕಾರ್ಧ.'ಸ್ವರ್ಗದಲ್ಲಿದ್ದು, ಪುಣ್ಯ ಕಡಿಮೆಯಾಗುತ್ತಿದ್ದಂತೆ ಭೂಮಿಗೆ ಬರುವವರು ತಮ್ಮ ಉಳಿದ ಪುಣ್ಯದಿಂದ ಸ್ವರ್ಗದ ಒಂದು ಸುಂದರವಾದ ಭಾಗವನ್ನು ಇಳೆಗೆ ತಂದಂತಿದೆ!' ಎಂದು ಕಾಳಿದಾಸ ಉಜ್ಜಯಿನಿಯನ್ನು ವರ್ಣಿಸುತ್ತಾನೆ. ಅವನಿಗೆ ಉಜ್ಜಯಿನಿಯ ಮೇಲೆ ಅಷ್ಟು ಪ್ರೀತಿ!

*** ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಮ್ |
ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋ ಗುಣಾಃ ||