Thursday, June 26, 2014

ಶ್ರೀ ಆಂಜನೇಯತತ್ತ್ವ


ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮ್ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ಸ್ಮರಣಾತ್ ಭವೇತ್ ||

ಆಸೇತುಹಿಮಾಚಲವೂ ಜನರಿಂದ ಪ್ರೀತಿಭಕ್ತಿಗಳಿಂದ ಪೂಜೆಗೊಳ್ಳುವ ದೇವರು ಶ್ರೀಮದಾಂಜನೇಯಸ್ವಾಮಿ. ಆಂಜನೇಯನ ಸ್ಮರಣೆ ಮಾಡುವವರಿಗೆ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತೆ, ಆರೋಗ್ಯ, ಮುಂತಾದವುಗಳು ಸಿದ್ಧಿಸುವವೆಂಬುದು ಮೇಲಿನ ಶ್ಲೋಕದ ತಾತ್ಪರ್ಯ. ಸ್ಮರಣೆಯೆಂದರೆ ಬರಿಯ ನಾಮಸ್ಮರಣೆಯಲ್ಲದೆ ಹನೂಮಂತನು ಪಾಲಿಸಿದ ಆದರ್ಶ, ಆತನ ಧ್ಯೇಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ.
          ಆಂಜನೇಯನು ಸಕಲರಿಗೂ ಪ್ರಾಣದಾತನಾದ ವಾಯುವಿನ ಪುತ್ರ. ವಾಯುವಿನಿಂದ ನಮ್ಮಲ್ಲಿ ಶಕ್ತಿಸಂಚಲನವಾಗುವುದರಿಂದ ಹನೂಮಂತನನ್ನು ಶಕ್ತಿಸ್ವರೂಪನೆಂದು ಕರೆಯುವುದು ಯುಕ್ತವೇ ಆಗಿದೆ. ಇನ್ನೂ ನಮ್ಮ ದೇಹವ್ಯಾಪಾರವೆಲ್ಲವೂ ವಾಯುವಿನಿಂದಲೇ ನಡೆಯುವುದರಿಂದ ಬುದ್ಧಿಗೂ, ಬಲಕ್ಕೂ ನಮ್ಮ ಇನ್ನಿತರ ಎಲ್ಲ ಶಕ್ತಿಗಳೂ ಆತನದೇ ರೂಪಗಳು; ಎಲ್ಲ ಶಕ್ತಿಗಳಿಗೂ ಆತನೇ ಮೂಲ.
ಆಂಜನೇಯನು ನಮಗೆ ತಿಳಿದಂತೆ ಕೇಸರಿ-ಅಂಜನಾದೇವಿಯರಿಗೆ ವಾಯುವಿನ ಪ್ರಸಾದದಿಂದ ಜನಿಸಿದವನು. ಚಿಕ್ಕಂದಿನಲ್ಲಿ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹವಣಿಸಿದ ಪರಾಕ್ರಮಶಾಲಿ. ಇಂಥ ಆಂಜನೇಯನು ಸಾಕ್ಷಾತ್ ಸೂರ್ಯನಲ್ಲಿ ಶಿಷ್ಯವೃತ್ತಿಯನ್ನು ಕೈಗೊಂಡನು. ವಿದ್ಯಾಭ್ಯಾಸಕ್ಕಾಗಿ ಸೂರ್ಯನ ತಾಪವನ್ನು ಸಹಿಸಿಕೊಂಡು, ಅವನ ಸತತಚಲನೆಯನ್ನೂ ಅಭ್ಯಸಿಸಿ ರೂಢಿಸಿಕೊಂಡು ಆದರ್ಶವಿದ್ಯಾರ್ಥಿಯೆನಿಸಿಕೊಂಡನು. ವಿದ್ಯಾಭ್ಯಾಸಾನಂತರ ಸೂರ್ಯನ ಆಜ್ಞೆಯಂತೆ ಸುಗ್ರೀವನ ಮಂತ್ರಿಯಾದನು. ನಂತರ ಶ್ರೀರಾಮಲಕ್ಷ್ಮಣರ ಪರಿಚಯವಾಗಿ ಸೀತಾಮಾತೆಯನ್ನು ಹುಡುಕಿದ್ದು, ಶ್ರೀರಾಮನಿಗೆ ಬಂಟನಾಗಿದ್ದು ಎಲ್ಲರೂ ಬಲ್ಲ ಕಥೆಯೇ ಆಗಿದೆ. ಉತ್ತರಕಾಂಡದ ಒಂದು ಸುಂದರವಾದ ಸಂದರ್ಭದಲ್ಲಿ ಶ್ರೀರಾಮನು ಸೀತೆಗೆ ಒಂದು ಹಾರವನ್ನಿತ್ತು – ’ತೇಜೋ ಧೃತಿರ್ಯಶೋ ದಾಕ್ಷ್ಯಂ ಸಾಮರ್ಥ್ಯಂ ವಿನಯೋ ನಯಃ | ಪೌರುಷಂ ವಿಕ್ರಮೋ ಬುದ್ದಿರ್ಯಸ್ಮಿನ್ನೇತಾನಿ ನಿತ್ಯದಾ’ –ಇಂತಹ ಗುಣಗಳು ಇರುವಂಥವನಿಗೆ ಇದನ್ನು ಕೊಡು ಎಂದಾಗ ಸೀತೆ ಅದನ್ನಿತ್ತಿದ್ದು ಹನೂಮಂತನಿಗೆ. ಹನೂಮಂತನ ಎಲ್ಲ ಕಥೆಗಳಲ್ಲಿಯೂ ನಮಗೆ ಮುಖ್ಯವಾಗಿ ಕಂಡುಬರುವುದು ಅವನ ಜಾಣತನ, ಸ್ಥೈರ್ಯ, ಧೈರ್ಯ, ಸ್ವಾಮಿನಿಷ್ಠೆಗಳು.

ಬುದ್ಧಿಮಾನ್ ಸಾಧುಸಮ್ಮತಃ :
ಶ್ರೀಮದಾಂಜನೇಯನು ಸಾಕ್ಷಾತ್ ಪ್ರಾಣವಾಯುವಿನ ಪುತ್ರನಾಗಿದ್ದರಿಂದ ಬುದ್ಧಿರೂಪನಾಗಿದ್ದಾನೆ. ಇನ್ನು ಕಥೆಯಲ್ಲಿ ನೋಡುವುದಾದರೆ ಆತನ ಬುದ್ಧಿಮತ್ತೆಯು ಅಗಾಧ. ಸಂಕಟಕಾಲದಲ್ಲಿಯೂ ಮೋಹಕ್ಕೊಳಗಾಗದೆ ಬುದ್ಧಿಸಾಹಾಯ್ಯದಿಂದಲೇ ಪರಿಸ್ಥಿತಿಯನ್ನು ವಿವೇಚಿಸುವ ಗುಣ ಆತನಲ್ಲಿತ್ತು. ಶ್ರೀರಾಮಲಕ್ಷ್ಮಣರನ್ನು ಕಂಡು ಸುಗ್ರೀವನು ಹೆದರಿದಾಗ, ಸ್ವಯಂಪ್ರಭೆಯ ಗುಹೆಯಲ್ಲಿ ಸಿಕ್ಕಿಬಿದ್ದಾಗ, ಅಂಗದನು ಕಂಗೆಟ್ಟು ಪ್ರಾಯೋಪವೇಶ ಮಾಡುವೆನೆಂದು ಹಠ ಹಿಡಿದಾಗ, ಸುರಸೆಯಿಂದ ತಪ್ಪಿಸಿಕೊಳ್ಳಬೇಕಾದಾಗ, ಸೀತಾಮಾತೆಯನ್ನು ಹುಡುಕುವಾಗ ಆಂಜನೇಯನ ಕಾರ್ಯಗಳನ್ನು ನಿರ್ವಿಘ್ನವಾಗಿ ಸಾಧಿಸಿದ್ದು ಸರ್ವೋಪಲಬ್ಧಿಹೇತುವಾದ ಆತನ ಬುದ್ಧಿ. ’ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ’ – ಜೀವದಿಂದಿರುವವನು ತಡವಾಗಿಯಾದರೂ ಆನಂದವನ್ನು ಪಡೆಯುತ್ತಾನೆ (ಜೀವನವನ್ನು ತೊರೆದವನು ಏನನ್ನೂ ಪಡೆಯುವುದಿಲ್ಲವೆಂದು ಅರ್ಥ), ’ಅನಿರ್ವೇದಃ ಶ್ರಿಯೋ ಮೂಲಮ್ ಅನಿರ್ವೇದಃ ಪರಂ ಸುಖಮ್ | ಅನಿರ್ವೇದೋ ಹಿ ಸತತಂ ಸರ್ವಾರ್ಥೇಷು ಪ್ರವರ್ತಕಃ’ – ನಿರಾಶೆಯನ್ನು ಬಿಟ್ಟರೆ ಸಕಲವನ್ನೂ ಸಾಧಿಸಬಹುದು ಎಂಬೀ ವಿಚಾರಗಳನ್ನು ನಾವು ಆತನಿಂದ ಕಲಿಯಬೇಕು.
ಇನ್ನು ಆತನ ವಾಕ್ಪಟುತ್ವವನ್ನು ಶ್ರೀರಾಮನು ಹೊಗಳಿದ ಕೆಲವು ಶ್ಲೋಕಗಳು ಶ್ರೀಮದ್ರಾಮಾಯಣದಲ್ಲಿಯೇ ಪ್ರಸಿದ್ಧವಾದವು. ಆತನ ಮಾತನ್ನು ಕೇಳಿದರೆ ಋಗ್ವೇದ, ಯಜುರ್ವೇದ, ಸಾಮವೇದಗಳನ್ನು ಅರ್ಥಸಹಿತವಾಗಿ ಅಧ್ಯಯನ ಮಾಡಿರುವನೆಂಬುದು ಸುವಿದಿತವಾಗುತ್ತಿತ್ತು. ಮಾತನ್ನು ಅನಾವಶ್ಯಕವಾಗಿ ವಿಸ್ತರಿಸುತ್ತಿರಲಿಲ್ಲ. ಸಂದೇಹಕ್ಕೆಡೆಯಾಗುವಂತೆ ಮಾತನಾಡುತ್ತಿರಲಿಲ್ಲ. ಬಹುವೇಗವಾಗಿಯೂ ಬಹುವಿಲಂಬಿತವಾಗಿಯೂ ಮಾತನಾಡುತ್ತಿರಲಿಲ್ಲ. ಮಾತು ಹೃದಯದಿಂದ ಹುಟ್ಟಿ ಕಂಠದಿಂದ ಬರುತ್ತಿತ್ತು. ಆತನ ವಾಙ್ಮಹಿಮೆ ಎಂತಹುದೆಂದರೆ ಕತ್ತರಿಸಲು ಕತ್ತಿಯನ್ನೆತ್ತಿದ ಶತ್ರುವಿನ ಚಿತ್ತವನ್ನೂ ಪ್ರಸನ್ನಗೊಳಿಸುತ್ತಿತ್ತು. ಇಂತಹ ವಾಕ್ಪಟುತ್ವವಿದ್ದರಿಂದಲೇ ಆತನು ಸೀತೆಗೆ ನಂಬಿಕೆಯನ್ನೂ, ರಾವಣನಲ್ಲಿ ಭೀತಿಯನ್ನೂ ಹುಟ್ಟಿಸಲು ಸಫಲನಾದನು.
ಸರ್ವಶಾಸ್ತ್ರವೇತ್ತನಾದ ಆಂಜನೇಯನು ಧರ್ಮಭೀರು. ರಾವಣನ ಅಂತಃಪುರದಲ್ಲಿದ್ದ ಸಾವಿರಾರು ಸ್ತ್ರೀಯರನ್ನು ನಿದ್ರಿಸುತ್ತಿರುವಾಗ ನೋಡಬೇಕಾಯಿತಲ್ಲಾ ಎಂದು ಚಿಂತಿಸುವಷ್ಟು ಪಾಪಭೀರು. ಆದರೂ ಬ್ರಹ್ಮಚಾರಿಯಾದ ತಾನು ಅವರನ್ನು ನೋಡಿದ್ದು ಪಾಪದ ದೃಷ್ಟಿಯಿಂದ ಅಲ್ಲವೆಂದು ವಿವೇಚಿಸಿ ಸಮಾಧಾನವನ್ನು ತಂದುಕೊಳ್ಳುತ್ತಾನೆ. ಆಂಜನೇಯನಲ್ಲಿ ತನ್ನನ್ನು ತಾನೇ ಅವಿರತವಾಗಿ ಪರೀಕ್ಷಿಸಿಕೊಳ್ಳುವ ಗುಣವಿತ್ತು. ಇದನ್ನು ನಾವು ವಿಶೇಷವಾಗಿ ಗಮನಿಸಬೇಕು.
ಭಕ್ತಿಯೇ ಶಕ್ತಿ
ಆಂಜನೇಯನು ತನ್ನ ಎಲ್ಲ ಕಾರ್ಯಗಳನ್ನೂ ಸ್ವಾಮಿಯಾದ ಶ್ರೀರಾಮನಿಗೋಸ್ಕರವಾಗಿಯೇ ಸಮರ್ಪಿಸಿದ್ದು. ಸೀತಾಮಾತೆಯನ್ನು ಹುಡುಕಿದ್ದಾಗಲಿ, ಲಂಕಾದಹನವಾಗಲಿ, ಸಂಜೀವನಪರ್ವತವನ್ನು ಹೊತ್ತು ತಂದಿದ್ದಾಗಲಿ ಯುದ್ಧದಲ್ಲಿ ಅತೀವಪರಾಕ್ರಮವನ್ನು ತೋರಿದ್ದಾಗಲಿ ಶ್ರೀರಾಮನ ಪ್ರಯೋಜನಕ್ಕಾಗಿಯೇ. ಅನಿತರಸಾಧ್ಯವಾದ ಈ ಕಾರ್ಯಗಳನ್ನು ನಿರ್ವಹಿಸಲು ಆತನಿಗೆ ಸಾಧ್ಯವಾಗಿದ್ದು ಆತನ ಸ್ವಾಮಿಭಕ್ತಿಯಿಂದ. ಈ ಸ್ವಾಮಿಭಕ್ತಿ ಯಾವ ಮಟ್ಟದ್ದೆಂದರೆ ಕೆಲವೊಮ್ಮೆ ಶ್ರೀರಾಮನ ಪರಾಕ್ರಮಕ್ಕಿಂತ ಆಂಜನೇಯನ ಭಕ್ತಿಯೇ ಹೆಚ್ಚು ಬಲವುಳ್ಳದ್ದೆಂದು ರಾಮಾಯಣದ ಕೆಲವು ಪ್ರಕ್ಷಿಪ್ತಭಾಗಗಳಲ್ಲಿ ಕಥೆಗಳುಂಟು.
ಶ್ರೀಮದ್ರಾಮಾಯಣದ ಉತ್ತರಕಾಂಡದಲ್ಲಿ ಶ್ರೀರಾಮನು ಹನೂಮಂತನಿಗೆ ಏನನ್ನಾದರೂ ಬೇಡಲು ಹೇಳಿದಾಗ ಆತನು ಕೇಳಿದುದು – ’ಸ್ನೇಹೋ ಮೇ ಪರಮೋ ರಾಜನ್-ಸ್ತ್ವಯಿ ತಿಷ್ಠತು ನಿತ್ಯದಾ | ಭಕ್ತಿಶ್ಚ ನಿಯತಾ ವೀರ ಭಾವೋ ನಾನ್ಯತ್ರ ಗಚ್ಛತು ||’ ಅಂದರೆ, ’ನಿನ್ನಲ್ಲಿ ಯಾವತ್ತೂ ನನಗೆ ಸ್ನೇಹಭಾವವು ಕಡಿಮೆಯಾಗದಿರಲಿ. ನಿನ್ನಲ್ಲಿ ಭಕ್ತಿಯನ್ನು ಬಿಟ್ಟು ಬೇರೆ ಯಾವ ಭಾವವೂ ನನ್ನಲ್ಲಿ ಬರದಿರಲಿ’ ಎಂದು. ಇಂತಹ ಅಹೈತುಕವಾದ ಭಕ್ತಿಪ್ರೀತಿಗಳು ಮಾನವಮಾತ್ರರಾದ ನಮಗೆ ದುಷ್ಕರವಾದರೂ ಶ್ರೀಮದಾಂಜನೇಯನ ಸ್ವಾಮಿನಿಷ್ಠೆ ನಮ್ಮಲ್ಲಿ ಮೈಗೂಡಬೇಕೆಂಬುದು ಇಲ್ಲಿ ಗ್ರಾಹ್ಯ.
ಅಪ್ರತಿಮಬಲಶಾಲಿ:
ಆಂಜನೇಯನ ಪರಾಕ್ರಮದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಇಡಿಯ ಸುಂದರಕಾಂಡ-ಯುದ್ಧಕಾಂಡಗಳು ಶ್ರೀಮದಾಂಜನೇಯನ ಯಶೋಗಾಥೆಗಳೇ ಆಗಿವೆ. ಅಪ್ರತಿಮಬಲಶಾಲಿಯಾದ ಆತನ ಬಾಹುಗಳಿಗೆ ವೈನತೇಯನ ರೆಕ್ಕೆಗಳ ಬಲವುಂಟು. ಪರಾಕ್ರಮದಲ್ಲಿ, ತೇಜಸ್ಸಿನಲ್ಲಿ ಆತನು ವಾಯುವಿಗೆ ಸಮಾನನು. ಆತನೇ ಹೇಳುವಂತೆ ಆದಿತ್ಯನೊಡನೆ ಉದಯಗಿರಿಯಿಂದ ಹೊರಟು ಅಸ್ತಾಚಲವನ್ನು ಮುಟ್ಟಿ, ತಿರುಗಿ ಬರುತ್ತ ಆದಿತ್ಯನು ಆಕಾಶಮಧ್ಯದಲ್ಲಿರುವಾಗಲೇ ಆತನನ್ನು ಎದುರುಗೊಳ್ಳಬಲ್ಲ ಶೀಘ್ರಗಾಮಿ. ಬೆಟ್ಟಗುಡ್ಡಗಳನ್ನೇ ಆಯುಧಗಳನ್ನಾಗಿ ಉಪಯೋಗಿಸುವ ಬಲಶಾಲಿ.
ಇಂತಹ ಹನುಮಂತನ ಬಗೆಗೆ ಶ್ರೀರಾಮನಾಡಿದ ಮಾತು – ಕೃತಂ ಹನುಮತಾ ಕಾರ್ಯಂ ಸುಮಹದ್ಭುವಿ ದುಷ್ಕರಮ್ | ಮನಸಾಪಿ ಯದನ್ಯೇನ ನ ಶಕ್ಯಂ ಧರಣೀತಲೇ|| – ಬೇರೆಯವರು ಮನಸ್ಸಿನಲ್ಲಿಯೂ ಚಿಂತಿಸದ ಮಹಾಕಾರ್ಯವನ್ನು ಹನೂಮಂತನು ಸಾಧಿಸಿದ್ದಾನೆ ಎಂದು.
ಇನ್ನು ಸಮುದ್ರವನ್ನು ಲಂಘಿಸುವಾಗ ಉಂಟಾದ ವಿಘ್ನಗಳು ಒಂದೇ? ಎರಡೇ? ಕ್ರೂರಿಯಾದ ಸಿಂಹಿಕೆ ಒಂದೆಡೆಯಾದರೆ, ಸ್ನಿಗ್ಧಭಾವದಿಂದ ತನ್ನಲ್ಲಿ ವಿಶ್ರಮಿಸಿ ಹೋಗೆಂದು ಬೇಡುವ ಮೈನಾಕಪರ್ವತನು ಇನ್ನೊಂದೆಡೆ. ಇದಾವುದಕ್ಕೂ ಬಗ್ಗದೆ, ಹಿಡಿದ ಕಾರ್ಯವನ್ನು ಸಂಪನ್ನಗೊಳಿಸಿಯೇ ತೀರುವೆನೆಂಬ ಅಚಲ ವಿಶ್ವಾಸ ಆತನನ್ನು ನಡೆಸಿತು.

ಹೀಗೆ ಶ್ರೀಮದಾಂಜನೇಯನು ಬುದ್ಧಿ-ಸ್ಥೈರ್ಯ-ಶೌರ್ಯ-ಬಲಗಳಲ್ಲಿ ಅದ್ವಿತೀಯನಾಗಿ ಸನಾತನಧರ್ಮದ ಪಾಠವನ್ನು ತನ್ನ ಚರ್ಯೆಯಿಂದ ಬೋಧಿಸುತ್ತಿದ್ದಾನೆ. ಅಂತಹ ಮಹಾಮಹಿಮನ ಚರಿತೆಯನ್ನೂ, ಅದರಿಂದ ನಾವು ಕಲಿಯಬೇಕಾದದ್ದನ್ನೂ, ಶ್ರೀಹನೂಮಜ್ಜಯಂತಿಯ ಈ ಶುಭಸಂದರ್ಭದಲ್ಲಿ ಚಿಕ್ಕದಾಗಿ ವಿಚಾರಿಸುವುದಾಗಿದೆ. ಇದನ್ನು ಯಥಾಶಕ್ತಿ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖಿಗಳಾಗೋಣ.

|| ಇತಿ ಶಮ್ ||

No comments: