ಸುಮಾರು ದಿನಗಳ ಹಿಂದೆ ನಾನು ಓದಿದ ಒಂದು ಪುಸ್ತಕ John Steinbeck ಬರೆದಿರುವ To a God Unknown ಎಂಬುದು. ಈ ಪುಸ್ತಕದಲ್ಲಿ ಮನುಷ್ಯ ಮತ್ತು ಅವನ ಪರಿಸರದ ಬಗ್ಗೆ ಇರುವ ಅವಿನಾಭಾವಸಂಬಂಧವನ್ನು ಬಹಳ ಚೆನ್ನಾಗಿ ಚಿತ್ರಿಸಲಾಗಿದೆ. ಪುಸ್ತಕದ ಮುಖ್ಯಪಾತ್ರ ಜೋಸೆಫ್ ಎಂಬುವವನು ತನ್ನ ತಂದೆಯನ್ನು ಒಂದು ಮರದಲ್ಲಿ ಕಂಡುಕೊಂಡು ಅದನ್ನು ಪೂಜಿಸುತ್ತಾನೆ. ವಿಗ್ರಹಾರಾಧನೆ ಮತ್ತು "ಪೇಗನ್" ನಂಬಿಕೆಗಳನ್ನು ವಿರೋಧಿಸುವ ಅವನ ಅಣ್ಣ ಆ ಮರವನ್ನು ಸಾಯಿಸಿದ ವರ್ಷವೇ ಅವರಿರುವ ಸ್ಥಳಕ್ಕೆ ಕ್ಷಾಮ ತಲೆದೋರುತ್ತದೆ. ಇನ್ನು ಹೆಚ್ಚು ಹೇಳಿದರೆ ಪುಸ್ತಕವನ್ನೋದುವ ಆಸಕ್ತಿ ಕಡಿಮೆಯಾಗಬಹುದೆಂಬ ಕಾರಣದಿಂದ ಹೇಳುವುದಿಲ್ಲ.
ಪುಸ್ತಕದ ಮುನ್ನುಡಿಯಲ್ಲಿ ಹಿರಣ್ಯಗರ್ಭಸೂಕ್ತದ ಕಾವ್ಯಾನುವಾದವನ್ನು ಬರೆಯಲಾಗಿದೆ. ಆ ಸೂಕ್ತದ "ಯಾವ ದೇವರಿಗೆ ನಮ್ಮ ಹವಿಸ್ಸು ಸಲ್ಲಲಿ?" ಎಂಬ ಪ್ರಶ್ನೆಯೇ ಇಡೀ ಪುಸ್ತಕದ ಬೆನ್ನೆಲುಬು. ಇಲ್ಲಿಯ ಪ್ರಕೃತಿವಿವರಣೆಯನ್ನು ಓದುತ್ತಿರುವಾಗಲಂತೂ ಒಂದು ಸುಂದರ ಪದ್ಯವನ್ನು ಮೆಲುಕು ಹಾಕುತ್ತಿರುವ ಅನುಭವವಾಯಿತು. ಪುಸ್ತಕ ಸಿಕ್ಕಿದರೆ ಖಂಡಿತ ಓದಿ.
ಪುಸ್ತಕದ ಗುಂಗಿನಲ್ಲಿದ್ದಾಗ, ನಮ್ಮ ಭಾರತೀಯರ ಹಬ್ಬಗಳು, ಮತ್ತು ಮಿಕ್ಕ ಆಚರಣೆಗಳು ಪ್ರಕೃತಿಯೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ಅದೆಷ್ಟು ಸಹಾಯಕಾರಿ ಎಂಬುದು ಮನಸ್ಸಿಗೆ ಬಂದಿತು. ಪ್ರಾಯಃ ನಮ್ಮದು ಪುರಾತನಸಂಸ್ಕೃತಿಯಾದ್ದರಿಂದ ಪ್ರಕೃತಿಪೂಜೆ ನಮ್ಮಲ್ಲಿ ಹೆಚ್ಚು ಮುಖ್ಯವಾಗಿದೆ. (ಮಿಕ್ಕ ಪುರಾತನಸಂಸ್ಕೃತಿಗಳು ಇಸ್ಲಾಂ ಮತ್ತು ಕ್ರೈಸ್ತಮತವೆಂಬ ದೊಡ್ಡ ಅಲೆಗಳಲ್ಲಿ ಕೊಚ್ಚಿಹೋಗಿವೆ.) ಹಿಮಾಲಯವಾಗಲಿ, ತಿರುಮಲವಾಗಲಿ ಅಥವಾ ಇಲ್ಲಿಯೇ ಪಕ್ಕದ ರಾಮದೇವರ ಬೆಟ್ಟವಾಗಲಿ, ಎಲ್ಲವೂ ಪೂಜಾರ್ಹ. ಹಾಗೆಯೇ ನದಿಗಳೂ ಮರಗಳೂ ಸಹ ದೈವತ್ವಕ್ಕೆ ಏರಿಸಲ್ಪಟ್ಟಿವೆ. ನಮ್ಮಲ್ಲಿ ಗಿಡಮರಗಳ ಪೂಜೆಯಂತೂ ಸರ್ವೇಸಾಮಾನ್ಯ. ಸಾಮಾನ್ಯವಾಗಿ ಎಂಥ ಕಿಷ್ಕಿಂಧೆಯಂಥ ಮನೆಯಾದರೂ, ಅಲ್ಲಿ ಚಿಕ್ಕ ತುಳಸಿ ಗಿಡ ಇರುತ್ತದೆ. ಅಶ್ವತ್ಥವೃಕ್ಷದ ಪೂಜೆಯಂತೂ ಕಾಂಪೌಂಡ್ ಇರುವ ಪ್ರತಿ ದೇವಾಲಯದಲ್ಲೂ ನಡೆಯುತ್ತದೆ.
ಆದರೆ ಈಗ ಒಂದು ಪ್ರಶ್ನೆ. ಸೂರ್ಯ, ಮರ, ಬೆಟ್ಟ, ಗುಡ್ಡ, ನದಿ, ಸಮುದ್ರ ಮುಂತಾದುವನ್ನು ದೇವರೆಂದು ಪರಿಗಣಿಸುವ ನಮಗೆ ಪರಿಸರದ ಬಗ್ಗೆ ಕಾಳಜಿ ಒಂದಿನಿತೂ ಏಕಿಲ್ಲ? ಪರಿಸರಕ್ಕೆ ಹಾನಿಯುಂಟುಮಾಡದೆ ಬದುಕಲು ನಮಗೆ ಸಾಧ್ಯವಿಲ್ಲವೇ? ಬೆಂಗಳೂರಿನಲ್ಲಿ ನಗರಪಾಲಿಕೆಯು rain water harvesting ಅನ್ನು ಕಡ್ಡಾಯ ಮಾಡಿದೆ. ಇದರ ವಿಷಯವಾಗಿ ಒಬ್ಬರೊಂದಿಗೆ ಚರ್ಚಿಸುತ್ತಿದ್ದಾಗ ಅವರು "ರೂಲ್ಸ್ ಪ್ರಕಾರ ಇಂತಿಷ್ಟು ಆದರೆ ಸಾಕು, ನಿಜವಾಗಿಯೂ ಮಳೆನೀರಿನ ಕೊಯ್ಲು ಮಾಡುವವರು ಹೆಚ್ಚು ಜನ ಇಲ್ಲ" ಎಂದು ಹೇಳಿದರು. ನನಗೆ ಇದನ್ನು ಕೇಳಿ ಬಹಳ ಬೇಸರವಾಯಿತು. ಇನ್ನು ದಟ್ಟವಾದ ಹೊಗೆಯನ್ನು ಬಿಡುತ್ತಾ emission check certificate ಪಡೆಯಲು ಕೈಯಲ್ಲಿ ಹಣ ಹಿಡಿದು ಹಲ್ಲು ಗಿಂಜುವುದು - ಇಂಥ ಪ್ರಕರಣಗಳು ಭಾರತದಂತಹ ದೇಶದಲ್ಲಿ ಮಾತ್ರ ಕಾಣಸಿಗುವುದನ್ನು ನೋಡಿದರೆ ವ್ಯಥೆಯಾಗುತ್ತದೆ.
ನಾವೊಬ್ಬರು ಅಂಥ ತಪ್ಪನ್ನು ಮಾಡುವುದಿಲ್ಲವೆಂದು ಪ್ರತಿಯೊಬ್ಬರೂ ನಿಶ್ಚಯಿಸಿದರೆ ಸಾಕಲ್ಲವೇ?
No comments:
Post a Comment