ಇತ್ತೀಚೆಗೆ ಒಂದು ಮೀಟಿಂಗಿನಲ್ಲಿ ಕುಳಿತಿದ್ದಾಗ, ಅಲ್ಲೇ ಮೇಜಿನ ಮೇಲಿದ್ದ ಮಾರ್ಕರ್ ಅನ್ನು ಕೈಗೆ ತೆಗೆದುಕೊಂಡು ನೋಡುತ್ತಿದ್ದೆ. ಅದರ ಮೇಲೆ Shachihata ಎಂದು ಬರೆದಿತ್ತು. ಈ ಹೆಸರು ಜಪಾನೀಯ ಹೆಸರೆಂದು ಅನ್ನಿಸಿದರೂ, ನಮ್ಮ ಭಾಷೆಯಲ್ಲಿ ಇದಕ್ಕೆ ಏನು ಅರ್ಥವನ್ನು ಕೊಡಬಹುದೆಂಬ ಯೋಚನೆ ಬಂದಿತು.
"ಶಚೀಹತ" ಎಂಬ ಸಮಾಸವನ್ನು ಎರಡು ರೀತಿಗಳಲ್ಲಿ ಬಿಡಿಸಬಹುದು. ಒಂದು ತೃತೀಯಾ ತತ್ಪುರುಷ-ಸಮಾಸ, 'ಶಚ್ಯಾ ಹತಃ' - ಶಚಿಯಿಂದ ಹತನಾದವನು ಎಂದು. ಇನ್ನೊಂದು ಪಂಚಮೀ ತತ್ಪುರುಷಸಮಾಸ, "ಶಚ್ಯಾಃ ಹತಃ" - ಶಚಿಯ ಕಾರಣದಿಂದ ಹತನಾದವನು ಎಂದು. ಹತ ಎನ್ನುವುದಕ್ಕೆ ಸಂಸ್ಕೃತದಲ್ಲಿ ನಾನಾ ಅರ್ಥಗಳಿವೆ. "ಹಾಳಾಗಿದ್ದು" ಎಂಬ ಅರ್ಥವೂ ಒಂದುಂಟು. ಮೊದಲನೆಯದಕ್ಕೆ, ಎಂದರೆ ಶಚಿಯಿಂದ ಹತನಾದವನ ಉದಾಹರಣೆ ನನಗೆ ಸಿಗಲಿಲ್ಲ. ಆದರೆ ಶಚಿಯ ಕಾರಣದಿಂದ ಹಾಳಾದವರು ದೊರೆತರು.
ವೇದಗಳ ಪ್ರಕಾರ ಇಂದ್ರ ಇಂದ್ರಿಯಗಳಿಗೆ ಸ್ವಾಮಿ. ಅವನ ಪತ್ನಿಯಾದ ಇಂದ್ರಾಣೀ ಅಥವಾ ಶಚೀ, ಇಂದ್ರಿಯವಸ್ತುಗಳಿಗೆ ಅಧಿದೇವತೆ. ಒಂದರ್ಥದಲ್ಲಿ "ಶಚೀಹತ" ಎಂದರೆ ಇಂದ್ರಿಯವಸ್ತುಗಳಿಂದ ಹಾಳಾದವರು ಎಂದು ಹೇಳಬಹುದಾದರೂ ಈ ಅರ್ಥ ನನಗೆ ಅಷ್ಟು ರುಚಿಸಲಿಲ್ಲ.
ಪುರಾಣಗಳಲ್ಲಿ ಬರುವ ಒಂದು ಕಥೆ ಹೀಗಿದೆ. ವೃತ್ರಾಸುರನನ್ನು ಸಂಹರಿಸಿದ ಇಂದ್ರ ಆ ಪಾಪವನ್ನು ನಿವಾರಿಸಿಕೊಳ್ಳಲು, ಹತ್ಯೆಯಿಂದ ತಪ್ಪಿಸಿಕೊಳ್ಳಲು ಅಡಗಿಕೊಳ್ಳುತ್ತಾನೆ. ಲೋಕವು ಅನಿಂದ್ರವಾಗುವುದನ್ನು ತಪ್ಪಿಸಲು ದೇವತೆಗಳು ಧರ್ಮಿಷ್ಠನಾದ ಮಹಾರಾಜ ನಹುಷನನ್ನು ಕರೆತಂದು ಇಂದ್ರನನ್ನಾಗಿ ಮಾಡುತ್ತಾರೆ. ಅಧಿಕಾರಮದದಿಂದ ನಹುಷ ಶಚಿಯನ್ನು ಬಯಸುತ್ತಾನೆ. ಪಲ್ಲಕ್ಕಿಯಲ್ಲಿ ಹೋಗುತ್ತಿರುವಾಗ ಬೇಗ ಹೋಗೆಂದು ಒಬ್ಬ ಋಷಿಯನ್ನು ಒದ್ದಾಗ ಕ್ರುದ್ಧನಾದ ಆ ಋಷಿ "ಅಜಗರನಾಗು" ಎಂದು ನಹುಷನನ್ನು ಶಪಿಸುತ್ತಾನೆ. ನಹುಷ ಅಜಗರನಾಗಿ ಭೂಮಿಯಲ್ಲಿ ಬೀಳುತ್ತಾನೆ. ಮುಂದೆ ಊಟಕ್ಕಾಗಿ ಭೀಮನನ್ನು ಹಿಡಿದು, ಯುಧಿಷ್ಠಿರ ಅವನನ್ನು ಬಿಡಿಸಿದಾಗ ಅವನಿಗೆ ಶಾಪವಿಮೋಚನೆಯಾಗುತ್ತದೆ. 'ಶಚೀಹತ' ಎಂಬುದು ನಹುಷನಿಗೆ ಅನ್ವರ್ಥನಾಮವಾಗುತ್ತದೆ.
ಇದೇ ಕಥೆಯನ್ನು ಹಿರಿಯ ಲೇಖಕರಾದ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು 'ಮಹಾಕ್ಷತ್ರಿಯ' ಎಂಬ ಸುಂದರ ಕೃತಿಯಲ್ಲಿ ಸ್ವಲ್ಪ ಭಿನ್ನವಾಗಿ ಮೂಡಿಸಿದ್ದಾರೆ. ನಹುಷನೇ ಇಲ್ಲಿ ಮಹಾಕ್ಷತ್ರಿಯ. ವೇದಕಾಲದ ಇಂದ್ರನಿಗೆ ಸಲ್ಲಬೇಕಾದಷ್ಟು ಮರ್ಯಾದೆಯನ್ನು ಸಲ್ಲಿಸುತ್ತಲೇ, ಮಾನವನಾದ ನಹುಷನನ್ನೂ ಇಂದ್ರನಿಗೆ ಸಮಾನವಾಗಿ ಚಿತ್ರಿಸಿದ್ದಾರೆ. ಸನ್ನಿವೇಶಗಳೇನೋ ಮೇಲೆ ಹೇಳಿದಂತೆಯೇ, ಆದರೆ ಪಾತ್ರಗಳ ಉದ್ದೇಶಗಳು ಮಾತ್ರ ಬೇರೆಯವು. ಇಲ್ಲಿ ನಹುಷ ಏಕಪತ್ನೀವ್ರತಸ್ಥ. ಇಂದ್ರ ಮರಳಿ ಬಂದಾಗ ನಹುಷನಂಥವನು ಇನ್ನು ನಮಗೆ ರಾಜನಾಗಿರುವುದಿಲ್ಲವಲ್ಲ ಎಂದು ದೇವತೆಗಳೂ ಮರುಗುವಷ್ಟು ದೊಡ್ಡ ವ್ಯಕ್ತಿ ಅವನು. ಹಳೆಯ ಇಂದ್ರನಿಗೆ ಅಧಿಕಾರವನ್ನು ಮರಳಿಸುವ ಮುಂಚೆ ಅವನು ಮಾಡದ ಒಂದು ಕೆಲಸವನ್ನು ಮಾಡಬೇಕೆಂದು ಸಂಕಲ್ಪಿಸಿ ನಹುಷ 'ಸಪ್ತರ್ಷಿಶಿಬಿಕಾರೋಹಣ'ವನ್ನು ಮಾಡುತ್ತಾನೆ. ಸಪ್ತರ್ಷಿಗಳು ಹೊತ್ತ ಶಿಬಿಕೆಯನ್ನು ಏರುವುದು 'ಸಪ್ತರ್ಷಿಶಿಬಿಕಾರೋಹಣ'. ಮಹಿಮಾನ್ವಿತವಾದ ಪಲ್ಲಕ್ಕಿಯಾದ್ದರಿಂದ ಅದರಲ್ಲಿ ಕುಳಿತವರು ಸಮಾಧಿಸ್ಥರಾಗಿಯೇ ಇರಬೇಕು. ಸಮಾಧಿಯಿಂದ ಕದಲಿದರೆ ಭ್ರಷ್ಟನಾಗುವುದು ನಿಶ್ಚಿತ. ಮುಂದೆ ಹೀಗಾಗುವುದೆಂದು ತಿಳಿದಿದ್ದರೂ ನಹುಷನೇ ಶಿಬಿಕಾರೋಹಣವನ್ನು ಮಾಡಿ, ಶಾಪವನ್ನೂ ಸಮಚಿತ್ತನಾಗಿ ಧರಿಸುತ್ತಾನೆ.
ನನಗೆ ಭಾಸ ತನ್ನ 'ಪಂಚರಾತ್ರ'ದಲ್ಲಿ ಮತ್ತು ರನ್ನ ತನ್ನ 'ಗದಾಯುದ್ಧ'ದಲ್ಲಿ ದುರ್ಯೊಧನನನ್ನು ಒಳ್ಳೆಯವನಂತೆ ಚಿತ್ರಿಸಿರುವುದು ಇಷ್ಟವಿಲ್ಲ. ಆದರೆ 'ಮಹಾಕ್ಷತ್ರಿಯ'ದಲ್ಲಿ ನಹುಷನನ್ನು ಒಳ್ಳೆಯ ಪಾತ್ರವನ್ನಾಗಿ ಚಿತ್ರಿಸಿರುವುದು ಬಹಳ ರುಚಿಸಿತು. ನನ್ನ ಪೂರ್ವಗ್ರಹಗಳೇ ಇದಕ್ಕೆ ಕಾರಣವಾದರೂ, ಕೇವಲ ಒಂದು ಕಾದಂಬರಿಯ ದೃಷ್ಟಿಯಿಂದ ನೋಡಿದರೂ 'ಮಹಾಕ್ಷತ್ರಿಯ' ಒಂದು ಉತ್ತಮೋತ್ತಮವಾದ ಕೃತಿ.
ದೇವುಡು ಅವರ ಕಾದಂಬರಿಗಳ ಶೈಲಿ ಇತರರ ಶೈಲಿಗಿಂತ ಭಿನ್ನ. ಅವರ ಭಾಷೆ ಸಂಸ್ಕೃತಭೂಯಿಷ್ಠವಾಗಿ, ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವೇ ಎಂದೆನ್ನಬಹುದು. ಅವರು ಹೇಳುವ ವಿಷಯದ ಬೋಧೆಯಾಗುವುದು ಇನ್ನೂ ಕಷ್ಟತರ (ನನ್ನ ಪತಿ ಹೇಳುವಂತೆ, ಅವರ ಕಾದಂಬರಿಯನ್ನು ಓದುವ ಬದಲು ಯಾವುದಾದರೂ ಉಪನಿಷತ್ತನ್ನೇ ಓದಬಹುದು!). ಆದರೆ ಅವರ ಭಾಷೆಯನ್ನೂ, ವಿಷಯವನ್ನೂ ಅರ್ಥ ಮಾಡಿಕೊಂಡರೆ ಆಗುವ ಆನಂದ, ಸಿಗುವ ತೃಪ್ತಿ ಮಾತ್ರ ಅನನ್ಯಸಾಧ್ಯ. ಅವರು ಬರೆದಿರುವ ಅನೇಕ ವಿಷಯಗಳು ಸಾಧನೆಯಿಂದ ಮತ್ತು ಅನುಭವದಿಂದ ಅವರಿಗೆ ಗೋಚರವಾದವು ಎಂಬುದನ್ನು ನೆನೆದರೆ ರೋಮಾಂಚನವಾಗುತ್ತದೆ. ವಸ್ತುಗಳನ್ನೂ ಸಂದರ್ಭಗಳನ್ನೂ ಕಣ್ಣಿಗೆ ಕಟ್ಟುವಂತೆ, ಅಲಂಕಾರಯುತವಾಗಿ ವರ್ಣನೆ ಮಾಡುವಲ್ಲಿ ಇನ್ನಾರೂ ದೇವುಡು ಅವರನ್ನು ಸರಿಗಟ್ಟಲಾರರು.
ದೇವುಡು ಅವರ ಇತರ ಪುಸ್ತಕಗಳು 'ಮಹಾಬ್ರಾಹ್ಮಣ' (ವಿಶ್ವಾಮಿತ್ರ ಬ್ರಹ್ಮರ್ಷಿಯಾದ ಕಥೆ), 'ಮಹಾದರ್ಶನ' (ಯಾಜ್ಞವಲ್ಕ್ಯರು ಶುಕ್ಲಯಜುರ್ವೇದವನ್ನು ಪಡೆದು 'ಸರ್ವಜ್ಞ'ನೆಂದು ಪುರಸ್ಕೃತರಾದ ಕಥೆ), ಮತ್ತು 'ಮಯೂರ' (ಮಯೂರವರ್ಮ ಪಲ್ಲವರನ್ನು ಸೋಲಿಸಿ ಕದಂಬರಾಜ್ಯಸ್ಥಾಪನೆಗೈದ ಕಥೆ - ಈ ಕಾದಂಬರಿಯನ್ನು ಚಿತ್ರೀಕರಿಸಿದ್ದಾರೆ. ಚಿತ್ರಕ್ಕಿಂತ ಕಾದಂಬರಿ ಶತಕೋಟಿಶಃ ಚೆನ್ನಾಗಿದೆಯೆಂದು ನನ್ನ ಅಭಿಪ್ರಾಯ). ಮೂರೂ ಉತ್ತಮವಾದ ಕಾದಂಬರಿಗಳೇ. ಈ ಪುಸ್ತಕಗಳನ್ನು ಓದಿ ಮುಗಿಸಿದಾಗ ಮನಸ್ಸಿನಲ್ಲುಳಿಯುವುದು ಶಾಂತಭಾವ.
ಒಂದು ಮಾರ್ಕರ್ ನ ದಯೆಯಿಂದ, ನನ್ನ ಮನಸ್ಸಿನಲ್ಲೂ ಈಗ ಇರುವುದು ಶಾಂತಭಾವ!
3 comments:
Great post! I liked the way you analyzed shachIhata and brought nahuSha's story.
It is a very good thought-provoking read.
Devudu is one author who can be read multiple times. His language grows on you and you start liking after a book.
However, as I am sure you know, yAjnavalkya is the draShTAra (not "baredaru" as you mention it) of the entire shuklayajurveda that includes both the IshAvAsyopaniShat as well as the bigger bRuhadAraNyaka - which features yAjnavalkya's story itself.
Overall, very nice post.
as always Parijata's post and Nilagriva's comment both are scholarly and enjoyable.
ಕೇವಲ ಮಾರ್ಕರ್ ನ ಮೇಲಿನ ಹೆಸರಿನಿಂದ ಕೂಡಾ ಸ್ಪೂರ್ತಿ ಪಡೆದುದು ಶ್ಲಾಘನೀಯ.
ಸಾಮಾನ್ಯವಾಗಿ ಕಸಬುದಾರ (professional) ವಿಮರ್ಶಕರ ವಿಮರ್ಶೆಗಳು ಹೆಚ್ಚಾಗಿ ನನ್ನ ತಲೆಯಮೇಲಿಂದ ಹೋಗುತ್ತವೆ. ಆದರೆ ನಿಮ್ಮಿಬ್ಬರ ಬರಹಗಳು ಸುಲಲಿತವಾಗಿವೆ. ವಂದನೆಗಳು. - ಆ ರಾಮ್
@nilagriva,
ನನಗೆ ನೆನಪಿರುವ ಪ್ರಕಾರ 'ಮಹಾದರ್ಶನ' ಕಾದಂಬರಿಯಲ್ಲಿ ಈಶಾವಾಸ್ಯವನ್ನು ಪಡೆಯುವುದನ್ನೇ ಪ್ರಧಾನವಾಗಿ ತೋರಿಸಿದ್ದಾರೆ. ಹಾಗಾಗಿ ಈಶಾವಾಸ್ಯದ ಬಗ್ಗೆ ಮಾತ್ರ ಬರೆದೆ. ಈಗ ತಿದ್ದಿದ್ದೇನೆ.
ದೇವುಡು ರವರ ಭಾಷೆ ನನಗೂ ಬಹಳ ಪ್ರಿಯವಾದದ್ದು.
@ಆರಾಮ್:
ಶ್ಲಾಘಿಸಿದ್ದಕ್ಕೆ ವಂದನೆಗಳು. ನನಗೂ ವಿಮರ್ಶಕರ ವಿಮರ್ಶೆಗಳು ಬಹಳ ಸಲ ಅರ್ಥವಾಗುವುದೇ ಇಲ್ಲ. ರಸಾಸ್ವಾದನವೊಂದೇ ನನಗೆ ತಿಳಿದಿರುವುದು :)
Post a Comment