ಇಂದು ಮಾರ್ಚ್ ೧೭ನೆಯ ತಾರೀಖು, ಕಳೆದ ಶತಮಾನದ ಒಬ್ಬ ಮಹಾದಾರ್ಶನಿಕ-ಕವಿ-ಋಷಿಯಾದ ಶ್ರೀ ಡಿ.ವಿ.ಗುಂಡಪ್ಪನವರ ಜನ್ಮದಿನ. ಡಿವಿಜಿ ಎಂದರೆ ನಮಗೆ ನೆನಪಿಗೆ ಬರುವುದು ಅದ್ಭುತವಾದ ಬರೆವಣಿಗೆ, ಆಳವಾದ ಒಳನೋಟ, ಪ್ರಾಮಾಣಿಕವಾದ ಮನಸ್ಸು, ಜೊತೆಗೆ ರಸವತ್ತಾದ ಮಾತು ಮತ್ತು ಹಾಸ್ಯ. 'ಬಾಳಿಗೊಂದು ನಂಬಿಕೆ', 'ದೇವರು', 'ಮಂಕುತಿಮ್ಮನ ಕಗ್ಗ', 'ಜ್ಞಾಪಕಚಿತ್ರಶಾಲೆ' ಮುಂತಾದ ಕೃತಿಗಳು ಜೀವನದಲ್ಲಿ ಪಾಲಿಸಬೇಕಾದ ಆದರ್ಶಗಳನ್ನು ಸೂಚಿಸುವುದರ ಜೊತೆಗೆ ಜೀವನದ ಸೌಂದರ್ಯವನ್ನೂ ಬಿಂಬಿಸುತ್ತವೆ. "ಆಹಾ, ಆ ಕಾಲ ಎಷ್ಟು ಚೆನ್ನಾಗಿತ್ತು, ಕಳೆದುಹೋಯಿತಲ್ಲ" ಎಂದು ಕೇವಲ ಪರಿತಪಿಸದೆ ಈ ಕಾಲದಲ್ಲಿಯೂ ಅಷ್ಟೇ ಆನಂದದಿಂದಿರಲು ಮಾರ್ಗವಿದೆಯೇ ಎಂಬ ವಿಚಾರದೆಡೆ ನಮ್ಮ ಯೋಚನೆ ಹರಿಯಲು ಪ್ರೇರಿಸುತ್ತವೆ ಇವರ ಕೃತಿಗಳು.
ಡಿವಿಜಿ ಅವರ 'ಮಂಕುತಿಮ್ಮನ ಕಗ್ಗ'ವಂತೂ ಅವರಿಗೆ 'ಆಧುನಿಕಗೀತಾಚಾರ್ಯ'ನೆಂಬ ಬಿರುದನ್ನೂ ತಂದು ಕೊಟ್ಟಿದೆ. ಕಗ್ಗವು ಜೀವನಕ್ಕೆ ಒಂದು manual ಇದ್ದಂತೆ. ಒಂದೊಂದು ಪದ್ಯದಲ್ಲಿಯೂ ಸ್ವಾರಸ್ಯಕರವಾದ, ವಿಚಾರಪ್ರಚೋದಕವಾದ ಮತ್ತು ಜೀವನಕ್ಕೆ ಉಪಯುಕ್ತವಾದಂಥ ವಿಷಯಗಳು ತುಂಬಿವೆ. ನನಗೆ ಬಹಳ ದಿನಗಳಿಂದ ಡಿವಿಜಿ ಅವರ ಬಗ್ಗೆ ಏನಾದರೂ ಬರೆದು, ಈ ದಿನ ಅದನ್ನು ಪೋಸ್ಟಿಸಬೇಕೆಂಬ ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ಕೆಲವು ವರ್ಷಗಳ ಹಿಂದೆ ಬರೆದ ಈ ಲೇಖನವನ್ನೇ, ಕೆಲವು ಬದಲಾವಣೆಗಳೊಂದಿಗೆ ನಿಮ್ಮ ಮುಂದಿಡುತ್ತಿದ್ದೇನೆ.
ಕಗ್ಗದ ಒಂದು ಪದ್ಯ ಹೀಗಿದೆ:
ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು
ಶ್ರೇಯಸ್ಸು ಧೀಮಹಿಮೆ ಮಂಕುತಿಮ್ಮ || ೫೪೬ ||
ಅರ್ಥ: ಆರ್ಯರು ಸಂಪತ್ತನ್ನು, ಬಲವನ್ನು ಅಥವಾ ಜಯವನ್ನು ಬೇಡಲಿಲ್ಲ; ಗಾಯತ್ರಿಯನ್ನೇ ಪರಮ ಮಂತ್ರವೆಂದು ತಿಳಿದು 'ಬುದ್ಧಿಯನ್ನು ಪ್ರಚೋದಿಸು' ಎಂದು ಅನುದಿನವೂ ಬೇಡಿದರು. ಬುದ್ಧಿಯ ಮಹಿಮೆ ಏನೆಂದರೆ ಅದು ಶ್ರೇಯಸ್ಸನ್ನು ತರುತ್ತದೆ.
ಈ ಪದ್ಯದಲ್ಲಿ ಡಿವಿಜಿಯವರು ಸಂಪತ್ತು, ಜಯಕ್ಕಿಂತ ಧೀ ಅಥವಾ ಬುದ್ಧಿ ಶ್ರೇಯಸ್ಕರ ಎಂದು ಹೇಳಿದ್ದಾರೆ. ಆರ್ಯರು ಎಂದರೆ ತಿಳಿದವರು. ನಮ್ಮಲ್ಲಿ ಸಂಪತ್ತನ್ನು ಗಳಿಸಲು, ಜಯವನ್ನು ಗಳಿಸಲು ಸಹ ಮಂತ್ರಗಳು ಇದ್ದರೂ ಇವೆಲ್ಲಕ್ಕಿಂತ ಶ್ರೇಷ್ಠವೆಂದು ತಿಳಿಯಲ್ಪಟ್ಟಿರುವ ಮಂತ್ರವೆಂದರೆ ಗಾಯತ್ರೀ ಮಂತ್ರ. ಎಲ್ಲರಿಗೂ ತಿಳಿದಂತೆ, ಗಾಯತ್ರೀ ಮಂತ್ರದ ನೇರ ಅರ್ಥ "ಎಲೈ ಸೂರ್ಯನೆ, ನಮ್ಮ ಬುದ್ಧಿಯನ್ನು ಪ್ರಚೋದಿಸು" ಎಂದು.
ಈ ಪದ್ಯದಲ್ಲಿ ಮುಖ್ಯವಾದ ಪದಗಳು ಧೀ, ಪ್ರಚೋದಿಸು, ಮತ್ತು ಶ್ರೇಯಸ್ಸು. ಮೂರರ ಬಿಡಿ-ಬಿಡಿ ಅರ್ಥಗಳನ್ನು ವಿಚಾರಿಸಿ ನಂತರ ಒಟ್ಟು ಅರ್ಥವನ್ನು ತಿಳಿಯಲು ಪ್ರಯತ್ನ ಪಡೋಣ.
ಮೊದಲಿಗೆ ಶ್ರೇಯಸ್ಸು ಎಂದರೆ ಏನು ಎನ್ನುವುದನ್ನು ನೋಡೋಣ. ಶ್ರೇಯಸ್ಸನ್ನು ಅರ್ಥ ಮಾಡಿಕೊಳ್ಳುವುದರ ಜೊತೆ ಪ್ರೇಯಸ್ಸನ್ನೂ ನಾವು ತಿಳಿಯಬೇಕು. ಕಠೋಪನಿಷತ್ತಿನಲ್ಲಿ ಒಂದು ಮಂತ್ರದ ಭಾಗ ಹೀಗಿದೆ.
ಅನ್ಯಚ್ಛ್ರೇಯೋನದುತೇವ ಪ್ರೇಯಃ
ಉಭೇ ತೇ ನಾನಾರ್ಥೇ ಪುರುಷಂ ಸಿನೀತಃ |
ತಯೋಃ ಶ್ರೇಯ ಆದದಾನಸ್ಯ ಸಾಧು
ಭವತಿ ಹೀಯತೇ ಅರ್ಥಾತ್ ಯ ಉ ಪ್ರೇಯೋ ವೃಣೀತೇ ||
ತಮ್ಮನ್ನು ಅಂಗೀಕರಿಸಲೆಂದು ಹತ್ತಿರ ಬಂದ ಶ್ರೇಯೋ-ಪ್ರೇಯಗಳಲ್ಲಿ ಶ್ರೇಯಸ್ಸನ್ನು ಅಂಗೀಕರಿಸಿದವನಿಗೆ 'ಸಾಧು' ಅಥವಾ ಒಳ್ಳೆಯದಾಗುತ್ತದೆ. ಪ್ರೇಯಸ್ಸನ್ನು ಅಂಗೀಕರಿಸಿದವನು ಗುರಿ ತಪ್ಪುತ್ತಾನೆ ಎಂದು ಇದರರ್ಥ. ಶ್ರೇಯಸ್ಸು ಎಂದರೆ ಶುಭ, ಮಂಗಳ ಮತ್ತು ಏಳಿಗೆ. ಗುರಿ ತಪ್ಪಿಸುವುದು ಪ್ರೇಯಸ್ಸು. ಇಲ್ಲಿ ಏಳಿಗೆಯನ್ನು ಉಂಟುಮಾಡುವುದು ಏನು ಎಂಬುದನ್ನು ವಿಚಾರಿಸುವುದು ಮನುಷ್ಯನಿಗೇ ಬಿಟ್ಟಿದ್ದು. ರಾಮನಿಗೂ ರಾವಣನಿಗೂ ಒಂದೇ ಮಾರ್ಗ ರುಚಿಸುವುದಿಲ್ಲ, ಸರಿ ಹೊಂದುವುದೂ ಇಲ್ಲ, ಅಲ್ಲವೇ?
ನಮ್ಮ ಮುಂದಿನ ಪದ ಧೀಃ ಎಂಬುದು. ಧೀ ಎಂದರೆ ಬುದ್ಧಿ. ಒಳ್ಳೆಯದರಿಂದ ಕೆಟ್ಟದ್ದನ್ನು ಬೇರ್ಪಡಿಸುವ ಶಕ್ತಿ. ವೇದಗಳಲ್ಲಿ ವಾಗ್ದೇವಿ ಅಥವಾ ಸರಸ್ವತಿಯನ್ನು ಯನ್ನು "ಧೀನಾಮವಿತ್ರೀ" ಎಂದು ಸ್ತುತಿಸಿದ್ದಾರೆ. ಎಂದರೆ 'ಬುದ್ಧಿಯನ್ನು ರಕ್ಷಿಸುವವಳು', ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ 'ಬುದ್ಧಿಯು ನಾಶವಾಗದಂತೆ ಅನುಗ್ರಹಿಸುವವಳು' ಎಂದು. ಹಾಗೆಯೇ ಲಲಿತಾಷ್ಟೋತ್ತರದಲ್ಲಿ ತಾಯಿಯನ್ನು 'ಸರ್ವೋಪಲಬ್ಧಿಹೇತುಶ್ಚ ಬುದ್ಧಿನಿಶ್ಚಯರೂಪಿಣೇ' ಎಂದು ವರ್ಣಿಸಿದ್ದಾರೆ. ಬುದ್ಧಿಯು 'ಸರ್ವೋಪಲಬ್ಧಿಹೇತು'- ಎಲ್ಲವನ್ನೂ ಪಡೆಯಲು ಕಾರಣವಾಗುವುದು. ಇದರ ಅರ್ಥ ಬುದ್ಧಿರೂಪಳಾಗಿದ್ದು, ಎಲ್ಲವನ್ನೂ ಪಡೆಯುವುದಕ್ಕೆ ಕಾರಣಳಾಗಿರುವವಳು ಎಂದು. ಕೇವಲ ಬುದ್ಧಿಯಿಂದಲೇ ನಾವು ಐಹಿಕ, ಆಮುಷ್ಮಿಕ ಫಲಗಳನ್ನು ಪಡೆಯಲು ಸಾಧ್ಯ. ಒಂದು ಸೋಜಿಗದ ಸಂಗತಿ ಇಲ್ಲಿ ಕಾಣಿಸುತ್ತದೆ. ಅದು ಏನೆಂದರೆ ಬುದ್ಧಿಪೂರ್ವಕವಾಗಿ ನಾವು ಮಾಡಿದ ಕೆಲಸಗಳಿಂದ ನಮಗೆ ಶ್ರೇಯಸ್ಸೇ ಆಗುವುದು. ಇದು ನಿತ್ಯಸತ್ಯ. ಭಗವದ್ಗೀತೆಯಲ್ಲಿ ದೇಹವೆಂಬ ರಥಕ್ಕೆ ಬುದ್ಧಿಯೇ ಸಾರಥಿ ಎಂದು ಹೇಳಿದೆ. ಎಂದರೆ ಬುದ್ಧಿಯ ಸಾಹಾಯ್ಯದಿಂದಲೇ ನಮ್ಮ ಕೆಲಸಗಳೆಲ್ಲ ಆಗುವುದು. ಬುದ್ಧಿ ಕೈಕೊಟ್ಟರೆ ಅದರ ದುಷ್ಪರಿಣಾಮಗಳು ಅನೇಕ.
ಮೊನ್ನೆ ಒಂದು ಉಪನ್ಯಾಸದಲ್ಲಿ ಶ್ರೀ ತೇಜೋಮಯಾನಂದರು ಒಂದು ಕಥೆಯನ್ನು ಹೇಳಿದರು. ಒಬ್ಬ ಮನುಷ್ಯ ಇದ್ದನಂತೆ, ವಿಪರೀತ ಮುಂಗೋಪಿ. ಅವನು ಸ್ನೇಹಿತನಿಗೆ ಹೇಳಿದನಂತೆ "ನೋಡಯ್ಯ, ನನಗೆ ಕೋಪ ಬಂದರೆ ಯೋಚನಾಶಕ್ತಿಯೇ ಹೊರಟುಹೋಗುತ್ತದೆ" ಎಂದು. ಅದಕ್ಕೆ ಸ್ನೇಹಿತ ಉತ್ತರಿಸಿದನಂತೆ "ಇಲ್ಲವಯ್ಯ, ನೀನು ಯೋಚನೆ ಮಾಡದಿದ್ದಾಗಲೇ ನಿನಗೆ ಕೋಪ ಬರುವುದು" ಎಂದು! ಇದರಿಂದ ಏನನ್ನು ಕಲಿಯಬಹುದು ಎಂದು ಯೋಚಿಸೋಣ. ಬುದ್ಧಿ ಒಂದು ಕ್ಷಣ ಕೈ ಕೊಟ್ಟರೂ ಅದರಿಂದ ಆಗುವ ನಷ್ಟ ಹೆಚ್ಚು. ಬುದ್ಧಿ "ಬೇಡ" ಎಂದಿದ್ದನ್ನು ಮನಸ್ಸು, ದೇಹಗಳು ಮಾಡಿದರೆ ಅಥವಾ ಬುದ್ಧಿ "ಮಾಡು" ಎಂದಿದ್ದನ್ನು ದೇಹಮನಸ್ಸುಗಳು ಮಾಡದಿದ್ದರೆ ಅನುಶಯಪೂರಿತವಾದ ಹಿನ್ನೋಟ ತಪ್ಪದು! ಆದ್ದರಿಂದ ಯಾವಾಗಲೂ, ಎಲ್ಲ ಕಡೆ ಬುದ್ಧಿಗೇ ಹೆಚ್ಚು ಪ್ರಾಶಸ್ತ್ಯ.
ಇನ್ನು ಉಳಿದ ಪದ "ಪ್ರಚೋದಿಸು" ಎಂಬುದು. ಬುದ್ಧಿ ಎನ್ನುವುದು ಕ್ರಯಕ್ಕೆ ಸಿಕ್ಕುವ ಅಥವಾ ಬೇಡಿದರೆ ಸಿಗುವ ಸಾಮಗ್ರಿಯಲ್ಲ. ಹಣ ಕೊಟ್ಟು ಪುಸ್ತಕವನ್ನು ಕೊಳ್ಳಬಹುದು, ಆದರೆ ಅದರಿಂದ ಏನನ್ನು ಕಲಿಯುತ್ತೇವೆ, ಹೇಗೆ ಕಲಿಯುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮನ್ನು ಅವಲಂಬಿಸಿದ್ದು. ಎಯ್ನ್ ರ್ಯಾಂಡ್ ನ ಪುಸ್ತಕಗಳನ್ನು ಓದಿ ಕಮ್ಯೂನಿಸ್ಟ್ ಆದವರೂ ಇರಬಹುದು, ಕಾರ್ಲ್ ಮಾರ್ಕ್ಸ್ ಅನ್ನು ಓದಿ ಕ್ಯಾಪಿಟಲಿಸ್ಟ್ ಆದವರೂ ಇರಬಹುದು! ಬುದ್ಧಿಯನ್ನು ದೇವರೂ ಸಹ ನಮಗೆ 'ಕೊಡಲು' ಸಾಧ್ಯವಿಲ್ಲ; ಕೇವಲ ಪ್ರಚೋದಿಸಬಹುದು, ಅಷ್ಟೆ. ನಮ್ಮ ಸುತ್ತಮುತ್ತಲಿನ ವಿಷಯಗಳು ಮತ್ತು ಓದುವ ವಿಚಾರಗಳು ನಮ್ಮ ಬುದ್ಧಿಯನ್ನು ಒಳ್ಳೆಯದಕ್ಕಾಗಲಿ, ಕೆಟ್ಟದಕ್ಕಾಗಲಿ ಕೇವಲ ಪ್ರಚೋದಿಸುತ್ತವೆ. ಅದರಿಂದಲೇ ಡಿವಿಜಿಯವರು ಇಲ್ಲಿ "ಪ್ರಚೋದಿಸು" ಎಂದು ಹೇಳಿದ್ದಾರೆ.
ಈ ಪದ್ಯದ ಒಟ್ಟು ಅರ್ಥವನ್ನು ಈಗ ವಿಚಾರಿಸೋಣ. ಕಠೋಪನಿಷತ್ತಿನಲ್ಲಿಯೇ ಮುಂದಿನ ಮಂತ್ರದಲ್ಲಿ "ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ" ಎಂದು ಹೇಳಿದೆ. ಎಂದರೆ, ಧೀರ ಅಥವಾ ಬುದ್ಧಿವಂತನು ಪ್ರೇಯಸ್ಸು, ಶ್ರೇಯಸ್ಸುಗಳಲ್ಲಿ ಶ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ ಎಂದು. ಸೂಕ್ಷ್ಮವಾಗಿ ನೋಡಿದರೆ, ಈ ಪದ್ಯದಲ್ಲಿ ಡಿವಿಜಿಯವರು ಹೇಳಿರುವುದೂ ಅದನ್ನೇ. ಬುದ್ಧಿಯಿಂದ ಅಥವಾ ಬುದ್ಧಿಯ ಅನುಮತಿಯಿಂದ ಸಂಪಾದಿಸಿರುವುದೆಲ್ಲವೂ ಶ್ರೇಯಸ್ಕರ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ನಾವು ವಿಚಾರ ಮಾಡಿ, ನಮಗೆ ಒಳ್ಳೆಯದನ್ನು ಉಂಟುಮಾಡುವುದನ್ನೇ ಆರಿಸಬೇಕು.
ಕಗ್ಗದ ಒಂದೊಂದು ಪದ್ಯಕ್ಕೂ ಅರ್ಥವ್ಯಾಪ್ತಿ ಅಧಿಕ. ಇಂಥ ಕೃತಿಯನ್ನು ನಮಗೆ ಕೊಟ್ಟ ರಸಋಷಿಗೆ ನಮೋ ನಮಃ.
8 comments:
1.
"ಪೋಸ್ಟಿಸಬೇಕೆಂಬ" :-)
2.
"ಪ್ರೇಯಸ್ಸನ್ನೂ ನಾವು ತಿಳಿಯಬೇಕು"
ಪ್ರೇಯಸ್ಸ = ?
Googled to find out what exactly preyas means. This is what I found:-
"Life, as one assumes does not offer two but three choices - good (Shreyas), pleasant (Preyas) and bad choices. It is up to us to make the right choice that would lead us to happiness. There is a clear distinction between good and bad and a choice can be easily made based on the outcome. The question arises - how to distinguish between good and pleasant? It is but natural to assume that good and pleasant are one and the same but is not so. The decisions that give us pleasure are driven by desires of a man. Desire or lobha is one of the 6 vices, from which a spiritual seeker is cautioned to beware of. A desire arises when senses remain uncontrolled and are let loose to drive our actions. Where as good decisions are those which are based on need and are practical. Those who have complete control of mind and whose sense of discrimination is well developed such people make good choices in life. It is safe to conclude that spiritualism and making good choices in life go hand in hand. A person with strong sense of discrimination and one who makes good choices evolves spiritually."
Rasarishigoo, avarannu nenesi "postisidavarigoo namonnamaha !
Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Webcam, I hope you enjoy. The address is http://webcam-brasil.blogspot.com. A hug.
@Aram,
I tried to remember the exact simple Kannada word equivalent to the English verb 'post', but could not. I think it is because of reduced blood-circulation to the brain ;)
Illuminating comment, as always. Thanks!
As far as my beliefs go, there is absolutely nothing wrong in coining a new word, "Postisu." I have never been a purist.
Language is there for our effective communication and we are not here for the sake of language. Language is but a tool to achieve an end - effective getting across a message. It is not an end in itself.
Matter of fact, I do like so much the word "postisu."
"Illuminating comment..." It was from Google, in fact sourced from some site related to Saibaba's discourse or something.
’ಪೋಸ್ಟುವುದು’ ಅಥವಾ ’ಪೋಸ್ಟ್ ಮಾಡುವುದು’ ’ಪೋಸ್ಟಿಸು’ವುದಕ್ಕಿಂತ ಸರಿಯಲ್ಲವೆ?
’ಸು’ ಬೇರೆಯವರಿಂದ, ಬೇರೆಯದರಿಂದ ಮಾಡಿಸುವ ಕ್ರಿಯೆ ಸೂಚಿಸುತ್ತದೆ. ಉದಾಹರಣೆಗಳು : ಹೋಗು-ಹೋಗಿಸು, ಬಾ-ಬರಿಸು, ಮಾಡು-ಮಾಡಿಸು, ಓಡು-ಓಡಿಸು ಇತ್ಯಾದಿ.
@turanga:
"’ಸು’ ಬೇರೆಯವರಿಂದ, ಬೇರೆಯದರಿಂದ ಮಾಡಿಸುವ ಕ್ರಿಯೆ ಸೂಚಿಸುತ್ತದೆ."
Howthey?
Haagiddalli ee vaakyavannu vishlesutteeraa - "naanu kaarannu vegadinda odiside?"
illi kaarannu naaney odisideney?
Athava "bayreyavarinda" odiside endaaguttadeyey?
@Aram,
ಇಲ್ಲಿ ಕಾರು ಓಡಿತು. ಅದು "ಬೇರೆಯದು". ಅದರಿಂದ ನೀವು ಓಡುವ ಕೆಲಸ ಮಾಡಿಸಿದಿರಿ. ನೀವೇ ಓಡಲಿಲ್ಲ. ನೀವು ರಾಮನಿಗೆ ಕಾರನ್ನು ಓಡಿಸಲು ಹೇಳಿ ಅವನು ಅದನ್ನು ಓಡಿಸಿದರೆ, ಆಗ ನೀವು ಕಾರನ್ನು ಓಡಿಸಿಸಿದ ಹಾಗಾಗುತ್ತದೋ ಏನೋ!
ಗುಂಡಪ್ಪನವರಿಂದ ನನಗಾದ ಒಂದು ಚಿಕ್ಕ ಸಹಾಯವನ್ನು, ಕೃತಜ್ಞತೆಯೊಡನೆ, ಸಂತೋಷದೊಡನೆ ಬರೆಯುತ್ತೇನೆ. ನನ್ನ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಎಂದೋ ನನ್ನ ಶೆಲ್ಫಿಗೆ ಬಂದು ಸೇರಿದ್ದ ಒಂದು ಹಳೆಯ ಪುಸ್ತಕ ಕಂಡಿತು. ಇದು ಕಾಳಿದಾಸನ ರಘುವಂಶದ ೪ನೆಯ ಸರ್ಗದ ೧೯೧೨ರ ಪ್ರಕಟನೆ. ಬೆಲೆ ಹನ್ನೆರಡಾಣೆ. ನಮ್ಮ ಹಳೆಯ ಸಂಪ್ರದಾಯದಂತೆ ಶಬ್ದ, ಅರ್ಥ, ಅನ್ವಯ, ತಾತ್ಪರ್ಯ ಇತ್ಯಾದಿಗಳಿಂದ ಕೂಡಿದ ಪುಸ್ತಕ. ಆಗಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಕಟವಾದ ಪುಸ್ತಕದಂತಿತ್ತು. ಆ ಕಾಲದಲ್ಲಿ ಈ ಕೆಲಸ ಮಾಡಿದವರು ಬೆಂಗಳೂರಿನ ಸೀಗೆಬೇಲಿಯ [ಈ ಸೀಗೆಬೇಲಿ ಎಲ್ಲಿದೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲೋ ಚಿಕ್ಕಪೇಟೆ, ಬಳೆಪೇಟೆ ಕಡೆ ಇದೆಯೋ ಏನೋ. ತಿಳಿದವರು ಹೇಳಿದರೆ ಕೃತಜ್ಞ!] ದೊಡ್ಡಬೆಲೆ ನಾರಾಯಣಶಾಸ್ತ್ರಿಗಳು. ಅವರ ಬಗ್ಗೆ ಇನ್ನಷ್ಟು ತಿಳಿಯಲು ಕುತೂಹಲಿಯಾಗಿ ನನ್ನ ಪುಸ್ತಕಗಳ ಮೇಲೆ ಮತ್ತೆ ಕಣ್ಣಾಡಿಸಿದೆ. ಜ್ಞಾಪಕಚಿತ್ರಶಾಲೆ ಕಣ್ಣಿಗೆ ಬಿತ್ತು. ವೈದಿಕ ಸಂಪ್ರದಾಯಸ್ಥರ ಮೇಲಿನ ಪುಸ್ತಕ ತೆಗೆದುಕೊಂಡು ನೋಡಲು ಆರಂಭಿಸಿದೆ. ೬೦-೭೦ರ ದಶಕದ ಬಹಳ ಕಡಿಮೆ ಮಟ್ಟದ ಕಾಗದದ ಮೇಲೆ ಅಚ್ಚಾದ ಪುಸ್ತಕ. ಈ ಕಾಲದ ಪುಸ್ತಕಗಳು ಎಷ್ಟೋ ಹಳೆಯ ಪುಸ್ತಕಗಳಿಗಿಂತ ಜೀರ್ಣವಾದಂತೆ ಕಾಣುತ್ತವೆ. ಆದರೆ ಪುಸ್ತಕದ ಕಡೆಯಲ್ಲಿ ಅಕಾರಾದಿಯಾದ ಮುಖ್ಯ ಪದ ಸೂಚಿ ಇತ್ತು! ಅದರಲ್ಲಿ ದೊಡ್ಡಬೆಲೆ ನಾರಾಯಣಶಾಸ್ತ್ರಿಗಳ ಹೆಸರು, ಅವರ ಬಗ್ಗೆ ವಿಷಯ ಇದ್ದ ಪುಟದ ಸಂಖ್ಯೆ ಕಂಡಿತು! ಓದಿ ಹತ್ತಿರ ಹತ್ತಿರ ಒಂದು ಶತಮಾನದ ಹಿಂದೆ ಕೆಲಸ ಮಾಡಿದ್ದ ಈ ಹಿರಿಯರ ಬಗ್ಗೆ ಒಂದಷ್ಟು ತಿಳಿದುಕೊಂಡೆ. ಈ ರೀತಿಯ ಹುಡುಕಾಟದ ಸೌಕರ್ಯ, ಅದರಿಂದ ದೊರೆಯುವ ಸಂತೋಷ ಪಾಶ್ಚಿಮಾತ್ಯ ವಿದ್ವತ್ಪ್ರಪಂಚದಲ್ಲಿ ಸಾಮಾನ್ಯ. ನಮ್ಮಲ್ಲಿ ಅಷ್ಟು ಸುಲಭವಲ್ಲ. ಈ ಕೆಲಸ ಆಗುವಂತೆ, ಅದೂ ಗಣಕಯಂತ್ರಗಳ ಸೌಕರ್ಯವಿಲ್ಲದ ಆ ಕಾಲದಲ್ಲಿ, ಪದಸೂಚಿಯಿಂದ ಕೂಡಿದ ಪುಸ್ತಕ ಹೊರತಂದವರು ನಮ್ಮ ಗುಂಡಪ್ಪನವರು. ಈ ರೀತಿಯ ಕೆಲಸ ಮಾಡಲು ಬೇಕಾದ ಧೈರ್ಯ, ನಿಷ್ಠೆ, ತಕ್ಷಣದ ಉಪಯೋಗ ಬಯಸದೆ ಕೆಲಸ ಮಾಡುವುದು, ನಾವು ಕಲಿಯಬಹುದಾದ ವಿಷಯ ಎಂದು ಕಾಣುತ್ತದೆ.
Post a Comment