ಕಳೆವ ಮುನ್ನವೆ ಹೊತ್ತು, ಓಡೋಡಿ ಹೋಗದಿರಿ
ಎಳೆಬಿಸಿಲ ತಂಪಿನಲಿ ನಗುವ ಹೂವುಗಳೇ !
ಅಳುವುಕ್ಕುವುದು ನೀವು ಸೊರಗುವುದ ನೋಡುತ್ತೆ
ನಳನಳಿಸಿ ಗಿಡಗಳಲಿ ನವಸುಮಗಳೇ! !
ತಡೆಯಿರೈ! ನಿಲ್ಲಿರೈ! ಸಂಜೆಯಾಗುವ ತನಕ
ಪಡುವಣದಿ ರವಿತೇಜ ಮರೆಯಾಗುವನಕ
ಕೂಡಿ ನಿಮ್ಮನು ನಾವು ಬರುವೆವೈ, ನಮ್ಮೊಡನೆ
ಮಾಡಿ ನೀವ್ ಸಂಧ್ಯೆಯೊಳಗರ್ಚನೆಯನು
ನಿಮ್ಮಂತೆ ಕ್ಷಣಿಕವೈ ನಮ್ಮ ಬಾಳೂ ಕೂಡ
ನಮ್ಮಯ ವಸಂತವೂ ಚಿರವಲ್ಲವಲ್ಲ!
ನಮ್ಮ ಜವದೇಳಿಗೆಗೆ ಜವರಾಯ ಕಾದಿರುವ
ಎಮ್ಮ ತೆರವೂ ಕೂಡ ನಿಮ್ಮಂತೆಯೇ
ಮುಗಿಸುವೆವು ನೀವು ಜೀವನ ಮುಗಿಸುವಂತೆ, ಬೇ
ಸಗೆಯ ಮಳೆ ಧರಣಿಯಿಂದಾವಿಯಾದಂತೆ
ನಗುವೆಲೆಯ ಮೇಲಿನಿಬ್ಬನಿಯ ಮುತ್ತುಗಳೆಲ್ಲ
ಮುಗಿಲ ಮಡಿಲನು ಸೇರಿ ಕಾಣೆಯಾದಂತೆ ||
6 comments:
ಹೃದ್ಯಮೀ ಪದ್ಯಮನವದ್ಯಬ೦ಧಗಳಿರ್ಕು
ಚೋದ್ಯದಕ್ಷಿಯ ತೆರೆಯೆ ಪ್ರಕೃತಿಯೆಡೆಗೆ
ಸದ್ಯದೊಳ್ಗು೦ ಸಲ್ಗುಮೀ ಚೌಪದಿಗಳಲ್ತೇ
ಪದ್ಯಪಾನದ ತು೦ಬು ಧಾರೆಯೊಳಗೆ
ಇ೦ಥ ಒಳ್ಳೆಯ ಪದ್ಯಗಳನ್ನು ಪದ್ಯಪಾನಕ್ಕೇ ಹಾಕದೇ ಇರಬೇಡಿರೆ೦ದು ವಿನ೦ತಿಸಿಕೊಳ್ಳುತ್ತೇನೆ... ಈಗಲೂ ಹಾಕಬಹುದು
:)
ಸೋಮ,
ಫೀಡ್-ಬ್ಯಾಕ್ ಗೆ ಧನ್ಯವಾದಗಳು.
ಮೆಚ್ಚುಗೆಯ ನುಡಿಯಿಂದಲೆನ್ನ-
ನೆಚ್ಚರಿಸಿದಿರಿ, ಋಣಿಯು ನಿಮಗಾ-
ನಚ್ಚಗನ್ನಡದಲ್ಲಿ ಕಾವ್ಯವನೊಕ್ಕಣಿಪೆ ಮುದದಿ
ಹೆಚ್ಚು ಹೇಳುವುದೇನು? ಮಗುವಿನ
ಪೆಚ್ಚು ಮಾತುಗಳನ್ನು ಕೂಡಲೆ
ಬಿಚ್ಚಿ ಮನಸನು, ಪೊಗಳುವಿರಿ ನೀವ್, ಸಾಧುವೀ ಪರಿಯು |
@Anon,
ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಅನುವಾದ!
ಧನ್ಯವಾದಗಳು ರಾಮಪ್ರಸಾದ್ ಅವರೇ :)
Very nice.
Post a Comment